ADVERTISEMENT

ಅಶಕ್ತರ ಸಹಾಯಕ್ಕೆ ಸರ್ಕಾರ ಧಾವಿಸಲಿ: ನ್ಯಾ. ಶಿವರಾಜ ವಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 21:03 IST
Last Updated 10 ನವೆಂಬರ್ 2024, 21:03 IST
   

ಬೆಂಗಳೂರು: ಸಾಹಿತಿಗಳು, ಕಲಾವಿದರು ಸೇರಿದಂತೆ ಬಹಳಷ್ಟು ಸಾಧಕರು ವಯಸ್ಸಾದ ಮೇಲೆ ಆರ್ಥಿಕ ಸಂಕಷ್ಟ, ಅನಾರೋಗ್ಯಕ್ಕೆ ತುತ್ತಾಗಿ ಕಷ್ಟಪಡುತ್ತಿರುತ್ತಾರೆ. ಅಂಥವರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ತಿಳಿಸಿದರು.

ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನವು ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಏಳು ಮಂದಿ ಸಾಧಕರಿಗೆ ‘ಸಂಸ್ಕೃತಿ ಸಿರಿ-2024’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸಮಾಜ ಮತ್ತು ಸರ್ಕಾರಗಳು ಸಾಧಕರನ್ನು ಗುರುತಿಸಿ ಗೌರವಿಸುವುದರ ಜೊತೆಗೆ ಸಾಧಕರು ನಡೆದು ಬಂದ ಹಾದಿ, ಪಟ್ಟ ಕಷ್ಟಗಳು, ಅವರ ಪರಿಶ್ರಮಗಳ ಬಗ್ಗೆಯೂ ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಅನರ್ಹರಿಗೆ ಪ್ರಶಸ್ತಿ ನೀಡಿದರೆ ಪ್ರಶಸ್ತಿಗೇ ಅವಮಾನ. ಅರ್ಹ ಸಾಧಕರನ್ನು ಗುರುತಿಸುವುದರಿಂದ ಅವರನ್ನು ಗೌರವಿಸಿದಂತಾಗುತ್ತದೆ. ಯುವಸಾಧಕರಿಗೆ ಪ್ರೇರಣೆ ಆಗುತ್ತದೆ ಎಂದು ವಿಶ್ಲೇಷಿಸಿದರು.

ಸಾಹಿತಿ ದೊಡ್ಡರಂಗೇಗೌಡ, ಪರಿಸರವಾದಿ ಎ.ಎನ್. ಯಲ್ಲಪ್ಪ ರೆಡ್ಡಿ, ಸಂಸ್ಕೃತಿ ಚಿಂತಕ ಮಲ್ಲೇಪುರಂ ಜಿ. ವೆಂಕಟೇಶ್, ಕವಿ ಎಸ್.ಜಿ. ಸಿದ್ಧರಾಮಯ್ಯ, ರಂಗಕರ್ಮಿ ಸಿ. ಬಸವಲಿಂಗಯ್ಯ, ಸುಗಮ ಸಂಗೀತ ವಿದ್ವಾಂಸರಾದ ಜಯಶ್ರೀ ಅರವಿಂದ್ ಹಾಗೂ ಹೊರನಾಡು ಸಾಂಸ್ಕೃತಿಕ ಸಂಘಟಕ ಆರ್.ಕೆ. ಶೆಟ್ಟಿ ಅವರಿಗೆ 2024ನೇ ಸಾಲಿನ ‘ಸಂಸ್ಕೃತಿ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಲೇಖಕ ಹಂಪ ನಾಗರಾಜಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಪ್ರತಿಷ್ಠಾನದ ಅಧ್ಯಕ್ಷ ವೇಮಗಲ್ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಆನಂದ ಮಾದಲಗೆರೆ,  ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಹಿ.ಚಿ. ಬೋರಲಿಂಗಯ್ಯ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಟಿ. ತಿಮ್ಮೇಶ್, ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ
ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.