ADVERTISEMENT

ಸೇವಾ ಮನೋಭಾವ ರೂಢಿಸಿಕೊಳ್ಳಿ: ನ್ಯಾ.ಸಂತೋಷ್ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 17:31 IST
Last Updated 19 ಜುಲೈ 2020, 17:31 IST

ಬೆಂಗಳೂರು: ‘ಸರ್ಕಾರಿ ಉದ್ಯೋಗಿಗಳು ಕೇವಲ ಸಂಬಳಕ್ಕಾಗಿ ಕೆಲಸ ಮಾಡದೆ, ಜನಸೇವಾ ಮನೋಭಾವ ರೂಢಿಸಿಕೊಳ್ಳಬೇಕು’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು ವತಿಯಿಂದ ಭಾನುವಾರ ಆನ್‌ಲೈನ್‌ ಮೂಲಕ ಹಮ್ಮಿಕೊಂಡಿದ್ದ ‘ಸಾಮಾಜಿಕ ಮೌಲ್ಯಗಳ ಏಳುಬೀಳು ಹಾಗೂ ಪರಿಣಾಮಗಳು’ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವುದು ದುರ್ದೈವದ ಸಂಗತಿ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಜನ ಅಧಿಕಾರಕ್ಕೆ ಬರಲು ಹಣ ವ್ಯಯ ಮಾಡುತ್ತಾರೆ. ಅಧಿಕಾರಕ್ಕೆ ಬಂದ ನಂತರ ಹಣ ಮಾಡುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಯುವಜನತೆ ಪ್ರಾಮಾಣಿಕತೆ ಹಾಗೂ ಮಾನವೀಯತೆಯನ್ನು ಮೈಗೂಡಿಸಿಕೊಂಡು ದೇಶದ ಸಾಮಾಜಿಕ ಮೌಲ್ಯ ಹಾಗೂ ಪ್ರಜಾಪ್ರಭುತ್ವ ತತ್ವಗಳನ್ನು ಎತ್ತಿ ಹಿಡಿಯಬೇಕಿದೆ. ‘ಏನಾದರೂ ಆಗು ಮೊದಲು ಮಾನವನಾಗು’ ಎಂಬ ತತ್ವ ಪಾಲಿಸಬೇಕಿದೆ’ ಎಂದರು.

ಹೈಕೋರ್ಟ್ ವಕೀಲ ಮೋಹನ್ ಕಾತರಕಿ, ಕಾನೂನು ಅಧ್ಯಯನ ವಿಭಾಗದ ಅಧ್ಯಕ್ಷ ಎನ್.ದಶರಥ, ಕೆಎಸ್‍ಎಲ್‍ಯು ವಿಶ್ರಾಂತ ಕುಲಪತಿ ಸಿ.ಎಸ್.ಪಾಟೀಲ, ಬಿ.ಆಚಾರ್ಯ, ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ ವಿ.ನಾಡಗೌಡ, ಸಹಾಯಕ ಪ್ರಾಧ್ಯಾಪಕ ಎನ್.ಸತೀಶ್ ಗೌಡ, ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗೌತಮ್ ಚಾಂದ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.