ADVERTISEMENT

ನಂದಿ ಬೆಟ್ಟದ ಜೀವವೈವಿಧ್ಯತೆ ಕಾಪಾಡಿ: ಪರಿಸರ ಕಾರ್ಯಕರ್ತರ ಮನವಿ

ಅಭಿವೃದ್ಧಿಯ ಹೆಸರಿನಲ್ಲಿ ಹಾನಿ ಮಾಡದಂತೆ ಪರಿಸರ ಕಾರ್ಯಕರ್ತರ ಮನವಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 14:10 IST
Last Updated 10 ಅಕ್ಟೋಬರ್ 2024, 14:10 IST
ನಂದಿ ಬೆಟ್ಟ
ನಂದಿ ಬೆಟ್ಟ   

ಬೆಂಗಳೂರು: ‘ಪಂಚ ನದಿಗಳ ಮೂಲವಾದ, ಭೌಗೋಳಿಕ ಪ್ರಾಮುಖ್ಯ ಹಾಗೂ ಜೀವವೈವಿಧ್ಯತೆ ಹೊಂದಿರುವ ನಂದಿ ಬೆಟ್ಟವನ್ನು ಉಳಿಸಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಈ ಬೆಟ್ಟಕ್ಕೆ ಹಾನಿ ಮಾಡಬಾರದು’ ಎಂದು ಪರಿಸರ ಕಾರ್ಯಕರ್ತರು ಆಗ್ರಹಿಸಿದರು.

ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ (ಯುಎಚ್‌ಆರ್‌ಎಸ್‌ಎಫ್) ಗುರುವಾರ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಸರತಜ್ಞ ಅ.ನ. ಯಲ್ಲಪ್ಪ ರೆಡ್ಡಿ, ‘ನಂದಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಇದೇ ವೇಳೆ ಪರಿಸರಕ್ಕೆ ಮಾರಕವಾದ ಚಟುವಟಿಕೆಗಳೂ ನಡೆಯುತ್ತಿವೆ. ಪ್ರವಾಸಿಗರನ್ನು ಆಕರ್ಷಿಸಲು ಸರ್ಕಾರ ಕೈಗೆತ್ತಿಕೊಂಡಿರುವ ರೋಪ್ ವೇ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಂದಾಗಿ ನಂದಿ ಬೆಟ್ಟಕ್ಕೆ ತೀವ್ರ ಆಪತ್ತು ಎದುರಾಗಿದೆ. ಕೇರಳದ ವಯನಾಡಿನಲ್ಲಿ ಸಂಭವಿಸಿದ ಮಾದರಿಯಲ್ಲಿಯೇ ಭೂಕುಸಿತವಾಗುವ ಆತಂಕವಿದ್ದು, ತಕ್ಷಣವೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು. 

‘ಅಪಾಯದ ಅಂಚಿಗೆ ಸಿಲುಕಿರುವ ನಂದಿ ಬೆಟ್ಟದ ಬಗ್ಗೆ ವ್ಯಾಪಕ ಅಧ್ಯಯನ ಕೈಗೊಳ್ಳಲಾಗಿದೆ. ಬೆಟ್ಟದಲ್ಲಿ ಪ್ರವಾಸಿಗರ ಸಂಖ್ಯೆ ವಿಪರೀತ ಏರಿಕೆಯಾಗುತ್ತಿದ್ದು, ರೆಸಾರ್ಟ್‌ಗಳು ಹೆಚ್ಚಾಗುತ್ತಿರುವ ಜತೆಗೆ ಅಲ್ಲಿನ ಪ್ರಕೃತಿಯ ಸೊಬಗಿನ ಮೇಲೆ ಒತ್ತಡ ತೀವ್ರಗೊಂಡಿದೆ. ಇದರಿಂದಾಗಿ ನಿಸರ್ಗ ಮುನಿಸಿಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ರೋಪ್ ವೇ ಸೇರಿ ವಿವಿಧ ಅಭಿವೃದ್ದಿ ಚಟುವಟಿಕೆಗಳನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು. 

ADVERTISEMENT

‘ನಂದಿ ಬೆಟ್ಟ ಉಳಿಸಿ ಎಂದು ಸರ್ಕಾರದ ವಿವಿಧ 11 ಇಲಾಖೆಗಳಿಗೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಆದರೆ, ಯಾವ ಇಲಾಖೆಯಿಂದಲೂ ನಮಗೆ ಪ್ರತಿಸ್ಪಂದನೆ ದೊರೆತಿಲ್ಲ. ಮೊದಲು ಭೂ ಕುಸಿತದ ತೀವ್ರತೆಯ ಬಗ್ಗೆ ಸರ್ಕಾರ ತಿಳಿದುಕೊಳ್ಳಬೇಕು’ ಎಂದರು. 

ಬತ್ತಿದ ನೀರಿನ ಬುಗ್ಗೆಗಳು: ಬೆಂಗಳೂರು ವಿಶ್ವವಿದ್ಯಾಲಯದ ಜೈವಿಕ ಉದ್ಯಾನದ ಸಂಯೋಜಕ ಟಿ.ಜೆ. ರೇಣುಕಾ ಪ್ರಸಾದ್, ‘ನಂದಿ ಬೆಟ್ಟವು ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ, ಅರ್ಕಾವತಿ, ಚಿತ್ರಾವತಿ, ಪಾಪಾಗ್ನಿ ನದಿಗಳ ಉಗಮ ಸ್ಥಾನವಾಗಿದೆ. ನೀರಿನ ಬುಗ್ಗೆಗಳು ಲಕ್ಷಾಂತರ ಜನರಿಗೆ ಜೀವನೋಪಾಯ ಕಲ್ಪಿಸಿದೆ. ಇಲ್ಲಿನ ನೀರು ಆಧ್ಯಾತ್ಮಿಕ ಹಾಗೂ ಔಷಧೀಯ ಗುಣ ಹೊಂದಿದೆ ಎಂದು ನಂಬಲಾಗಿದೆ. ಇಲ್ಲಿ ಅಂತರ್ಜಲ ಮರುಪೂರಣವನ್ನು ಕಾಪಾಡಿಕೊಳ್ಳದಿದ್ದರಿಂದ ನೀರಿನ ಬುಗ್ಗೆಗಳು ಬತ್ತಿ ಹೋಗಿವೆ. ಅಂತರ್ಜಲ ಮಟ್ಟವನ್ನು ನಿರ್ವಹಿಸುವುದು ಜೈವಿಕ ವ್ಯವಸ್ಥೆಗೆ ಅತ್ಯಗತ್ಯ. ಬತ್ತಿದ ನೀರಿನ ಬುಗ್ಗೆಗಳನ್ನು ಪುನರುಜ್ಜೀವನಗೊಳಿಸಬೇಕು’ ಎಂದು ಹೇಳಿದರು.  

ಸಾಮಾಜಿಕ ಹೋರಾಟಗಾರ್ತಿ ಸಂಜನಾ ಜಾನ್, ಯುಎಚ್‌ಆರ್‌ಎಸ್‌ಎಫ್ ಸಂಸ್ಥಾಪನಾಧ್ಯಕ್ಷ ಸಿ.ಡಿ. ಕಿರಣ್, ಗೌರವ ಅಧ್ಯಕ್ಷ ಮಂಜುನಾಥ ಹೆಗಡೆ, ನಿವೃತ್ತ ಪೊಲೀಸ್ ಅಧಿಕಾರಿ ಮುನಿವೆಂಕಟಪ್ಪ ಉಪಸ್ಥಿತರಿದ್ದರು.

ರೋಪ್ ವೇ ನಿರ್ಮಾಣದಂತಹ ಯೋಜನೆಗಳಿಂದ ಸರ್ಕಾರಕ್ಕೆ ಆದಾಯ ಬರಬಹುದು. ಆದರೆ ಮುಂದಿನ ಪೀಳಿಗೆಗೆ ಪ್ರಾಕೃತಿಕ ಸಂಪತ್ತು ಇರುವುದಿಲ್ಲ
ಆರ್. ಚಂದ್ರು ಚಲನಚಿತ್ರ ನಿರ್ದೇಶಕ
ಈಗಾಗಲೇ ನೀರು ಗಾಳಿ ಮಾಲಿನ್ಯಗೊಂಡಿದೆ. ಪರಿಸರ ಕಡೆಗಣಿಸಿ ಅಭಿವೃದ್ಧಿ ಮುಂದುವರಿಸಿದರೆ ನಗರವು ಕಾಂಕ್ರೀಟ್ ಕಾಡಾಗಲಿದೆ
ರಾಜೇಂದ್ರಸಿಂಗ್ ಬಾಬು ಚಲನಚಿತ್ರ ನಿರ್ದೇಶಕ

‘ವಿಶ್ವ ಪರಂಪರೆಯ ತಾಣವಾಗಲಿ’

‘ಮುಂದಿನ ಪೀಳಿಗೆಗಾಗಿ ನಂದಿ ಬೆಟ್ಟದ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಲು ಜೈವಿಕ ವೈವಿಧ್ಯತೆಯ ಕೇಂದ್ರವನ್ನಾಗಿ ಈ ಸ್ಥಳವನ್ನು ಘೋಷಿಸಬೇಕು. ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲು ಅನುಕೂಲವಾಗುವಂತೆ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು’ ಎಂದು ಗೀವ್ ಲೈಫ್ ಫೌಂಡೇಷನ್‌ನ ಅಧ್ಯಕ್ಷ ಭರತ್ ಎಸ್. ಫಿಶರ್ ಆಗ್ರಹಿಸಿದರು.  ‘ಅಭಿವೃದ್ಧಿಯ ಬದಲು ಪರಿಸರಸ್ನೇಹಿ ಅಭ್ಯಾಸಗಳಿಗೆ ಆದ್ಯತೆ ನೀಡಬೇಕು. ಬೆಂಗಳೂರಿನಲ್ಲಿ ಈಗಾಗಲೇ ಮಾಲಿನ್ಯ ಹೆಚ್ಚುತ್ತಿದೆ. ಈ ಅವಧಿಯಲ್ಲಿ ನಂದಿ ಬೆಟ್ಟವನ್ನು ಆರೋಗ್ಯ ಧಾಮವನ್ನಾಗಿ ಸಂರಕ್ಷಿಸಬೇಕಾದ ಅಗತ್ಯವಿದೆ’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.