ADVERTISEMENT

‘ಎಸ್‌ಬಿಎಂ ಹೌಸಿಂಗ್’ ಅಕ್ರಮ: 320 ಮಂದಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2022, 20:31 IST
Last Updated 10 ಫೆಬ್ರುವರಿ 2022, 20:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ದಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆಫೀಸರ್ಸ್ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ’ ಹೆಸರಿನಲ್ಲಿ ನಿವೇಶನ ಅಭಿವೃದ್ಧಿಪಡಿಸುವ ಆಮಿಷವೊಡ್ಡಿ ಹಣ ಪಡೆದು ವಂಚಿಸಿರುವ ಬಗ್ಗೆ ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಎಸ್‌ಬಿಎಂ (ಸ್ಟೇಟ್ ಬ್ಯಾಂಕ್ ಆಫ್ ಮೈಸೂರು) ನಿವೃತ್ತ ವ್ಯವಸ್ಥಾಪಕ ಎ.ವಿ. ಸತ್ಯನಾರಾಯಣ ಎಂಬುವರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿಗಳು ಎನ್ನಲಾದ ಕಿಶೋರ್, ಜಿ.ವಿ. ಅಜಿತ್‌ಪ್ರಸಾದ್, ಟಿ.ಎಸ್. ರಾಜಣ್ಣ,
ಕೆ. ಜನಾರ್ದನ್, ಶೈಲಜಾ ಕುಮಾರಿ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿಗಳು ಹಾಗೂ ಇತರರು ಸೇರಿಕೊಂಡು ‘ದಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆಫೀಸರ್ಸ್ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ’ ಹುಟ್ಟು ಹಾಕಿದ್ದರು. ಬ್ಯಾಂಕ್‌ ಉದ್ಯೋಗಿಗಳಿಗೆ ಕಡಿಮೆ ದರದಲ್ಲಿ ನಿವೇಶನ ಕೊಡುವುದಾಗಿ ಆಮಿಷವೊಡ್ಡಿದ್ದರು.’

ADVERTISEMENT

‘ದೂರುದಾರ ಸತ್ಯನಾರಾಯಣ ಸೇರಿ 320 ಮಂದಿಯನ್ನು ಸಂಪರ್ಕಿಸಿದ್ದ ಆರೋಪಿಗಳು, ‘ಜಿ.ಪಿ. ಗೋಲ್ಡನ್ ಹೋಮ್ಸ್ ಪ್ರಾಪರ್ಟಿ ಕಂಪನಿ ಜೊತೆ ಸೇರಿ ದೇವನಹಳ್ಳಿ ತಾಲ್ಲೂಕಿನ ಸಿಂಗರಹಳ್ಳಿ ಗ್ರಾಮದ ಬಳಿ ಹೊರ ಬಡಾವಣೆ ನಿರ್ಮಿಸಲಾಗುತ್ತಿದೆ. ಬ್ಯಾಂಕ್‌ ಉದ್ಯೋಗಿಗಳಿಗಾಗಿ, ಪ್ರತಿ ಚದರ್‌ ಅಡಿಗೆ ₹ 550 ದರ ನಿಗದಿ ಮಾಡಲಾಗಿದೆ’ ಎಂದಿದ್ದರು. ಅದನ್ನು ನಂಬಿದ್ದ ದೂರುದಾರ ಹಾಗೂ ಇತರರು, ಹಣ ನೀಡಿ ನಿವೇಶನ ಕಾಯ್ದಿರಿಸಿದ್ದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

‘ಹಲವು ವರ್ಷವಾದರೂ ಬಡಾವಣೆ ಅಭಿವೃದ್ಧಿಯಾಗಿಲ್ಲ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಅನುಮೋದನೆಯೂ ಬಡಾವಣೆಗೆ ಸಿಕ್ಕಿಲ್ಲ. ಆಸ್ತಿಯ ಮದರ್ ಡೀಡ್ ಸಹ ಕಾನೂನುಬದ್ಧವಿಲ್ಲ. ಇದೇ ಕಾರಣಕ್ಕೆ ಬಡಾವಣೆಯ ಭೂ ಪರಿವರ್ತನೆ ಆದೇಶಗಳನ್ನೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರದ್ದುಪಡಿಸಿದ್ದಾರೆ. ನಿವೇಶನ ಆಮಿಷವೊಡ್ಡಿ ಆರೋಪಿಗಳು, 320 ಮಂದಿಯಿಂದ ಹಣ ಪಡೆದು ವಂಚಿಸಿದ್ದಾರೆ. ಈ ಸಂಗತಿ ದೂರಿನಲ್ಲಿದೆ’ ಎಂದೂ ಪೊಲೀಸ್ ಮೂಲಗಳು ವಿವರಿಸಿವೆ.

‘ದೂರಿನನ್ವಯ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಸದ್ಯದಲ್ಲೇ ಆರೋಪಿಗಳಿಗೆ ನೋಟಿಸ್ ನೀಡಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದೂ ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.