ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರವನ್ನು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ನೀಡಿದೆ. ಈ ತೀರ್ಪನ್ನು ರಾಜ್ಯ ಸರ್ಕಾರ ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಆಗ್ರಹಿಸಿದೆ.
‘ಪರಿಶಿಷ್ಟ ಜಾತಿಗಳಲ್ಲಿ ಮನೆ ಮಾಡಿರುವ ಅಸಮಾನತೆ ಆತಂಕಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ತೆರೆ ಎಳೆದಿದೆ. ರಾಜ್ಯ ಸರ್ಕಾರ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಜನಸಂಖ್ಯೆ ಆಧಾರದ ಮೇಲೆ ಹಂಚಿಕೆ ಮಾಡಬೇಕು’ ಎಂದು ಸಮಿತಿ ಸಂಚಾಲಕ ಎಸ್. ಮಾರೆಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
‘ಹಿಂದುಳಿದ ಜಾತಿಗಳಿಗೆ ಅನ್ವಯಿಸಿದ ಕೆನೆಪದರ ಮಾನದಂಡಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನ್ವಯಿಸುವ ಮಾನದಂಡಗಳು ಭಿನ್ನವಾಗಿರಬೇಕೆಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಪರಿಶಿಷ್ಟ ಜಾತಿಗಳ ಒಳಮೀಸಲಾತಿಯ ಜೊತೆಗೆ ಕೆನೆಪದರ ತಳಕು ಹಾಕಿ ವಿಷಯಾಂತರ ಮಾಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಜಾರಿಗೊಳಿಸಲು ಆಗ್ರಹಿಸಿ ಆಗಸ್ಟ್ 13ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಸಂಚಾಲಕರಾದ ಬಿ.ಕೆ. ಕೇಶವಮೂರ್ತಿ, ವೆಂಕಟೇಶ ಎಂ., ಕೃಷ್ಣಪ್ಪ ಕನರಹಳ್ಳಿ, ಶ್ರೀನಿವಾಸ್, ಭೀಮರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.