ಬೆಂಗಳೂರು: ‘ಸರ್ಕಾರದ ಬಳಿ ದುಡ್ಡಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಶಾಲೆಗಳ ಸುಧಾರಣೆಗೆ ಕ್ರಮ ಕೈಗೊಳ್ಳದೆ ಇರಬಾರದು. ದಾನಿಗಳು, ದತ್ತು ಪಡೆಯುವವರನ್ನು ಗುರುತಿಸಿ ಅವರ ನೆರವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಕಾಲೇಜುಗಳೂ ಶಾಲೆಗಳನ್ನು ದತ್ತು ಪಡೆಯಬೇಕು’ ಎಂದು ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್.ದೊರೆಸ್ವಾಮಿ ಪ್ರತಿಪಾದಿಸಿದ್ದಾರೆ.
‘ಒಂದೊಂದು ವೈದ್ಯಕೀಯ ಕಾಲೇಜು ಕನಿಷ್ಠ 10 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಬೇಕು, ಜತೆಗೆ ದಂತ ವೈದ್ಯಕೀಯ, ಎಂಜಿನಿಯರಿಂಗ್, ಪದವಿ, ಪದವಿಪೂರ್ವ ಕಾಲೇಜುಗಳೂ ದತ್ತು ಪಡೆಯಲು ಮುಂದೆ ಬಂದಾಗ ಸರ್ಕಾರಿ ಶಾಲೆಗಳ ಸ್ಥಿತಿಗತಿ ಸುಧಾರಣೆಯಾಗುತ್ತದೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಪಿಇಎಸ್ ಶಿಕ್ಷಣ ಸಮೂಹ 1991ರಲ್ಲಿಯೇ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಮಾದರಿ ಕಾರ್ಯ ಆರಂಭಿಸಿತ್ತು. ಈಗಲೂ ಅದನ್ನು ಮುಂದುವರಿಸಿದೆ. ಶಾಲೆಗಳ ದತ್ತು ಪಡೆಯುವುದಕ್ಕೆ ಸಂಬಂಧಿಸಿದಂತೆ 2001ರ ನೀತಿಯನ್ನು ಸರ್ಕಾರ 2009ರಲ್ಲಿ ಪರಿಷ್ಕರಿಸಿತ್ತು. ದಾನಿಗಳಿಂದ ದೇಣಿಗೆಯೊಂದಿಗೆ, ಶಾಲೆಗಳ ಆಯ್ಕೆ ಮತ್ತು ಅಭಿವೃದ್ದಿಗೆ ಕ್ರಿಯಾಯೋಜನೆಯ ಸಹಭಾಗಿತ್ವ ಹೊಂದುವ ಒಡಂಬಡಿಕೆಯ ರೂಪಿಸಲಾಗಿತ್ತು. ಇದನ್ನು ಹಿಂದುಳಿದ ಪ್ರದೇಶಗಳಲ್ಲಿ ಸಮರ್ಥವಾಗಿ ಜಾರಿಗೆ ತರುವ ಅಗತ್ಯ ಇದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.