ADVERTISEMENT

ಮದ್ಯ ಸೇವಿಸಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಚಾಲಕರು: 351 ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 15:45 IST
Last Updated 8 ನವೆಂಬರ್ 2024, 15:45 IST
ಸಂಚಾರ ನಿಯಮ ಉಲ್ಲಂಘಿಸಿದ ಶಾಲಾ ವಾಹನ ಚಾಲಕನಿಂದ ದಂಡ ಸಂಗ್ರಹಿಸಿ ರಶೀದಿ ನೀಡಿದ ಸಂಚಾರ ವಿಭಾಗದ ಪೊಲೀಸರು 
ಸಂಚಾರ ನಿಯಮ ಉಲ್ಲಂಘಿಸಿದ ಶಾಲಾ ವಾಹನ ಚಾಲಕನಿಂದ ದಂಡ ಸಂಗ್ರಹಿಸಿ ರಶೀದಿ ನೀಡಿದ ಸಂಚಾರ ವಿಭಾಗದ ಪೊಲೀಸರು    

ಬೆಂಗಳೂರು: ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ ಮಾಡುತ್ತಿದ್ದ ಹಾಗೂ ನಿಗದಿತ ಮಿತಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ವಾಹನದಲ್ಲಿ ಕರೆದೊಯ್ಯುತ್ತಿದ್ದ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ನಗರ ಸಂಚಾರ ವಿಭಾಗದ ಪೊಲೀಸರು, ಶುಕ್ರವಾರ 351 ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶುಕ್ರವಾರ ಬೆಳಿಗ್ಗೆ 7.30ರಿಂದ 9.30ರ ವರೆಗೆ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 3,395 ಶಾಲಾ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿದ್ದು, ₹65,400 ದಂಡ ಸಂಗ್ರಹಿಸಿದ್ದಾರೆ. 

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ 24 ಚಾಲಕರು ಹಾಗೂ ನಿಗದಿಗಿಂತ ಹೆಚ್ಚುವರಿ ಮಕ್ಕಳನ್ನು ವಾಹನದಲ್ಲಿ ಕರೆದೊಯ್ಯುತ್ತಿದ್ದ 327 ಚಾಲಕರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸವಾರನಿಗೆ ಗಾಯ: ನಾಯಂಡಹಳ್ಳಿಯ ಹೊರವರ್ತುಲ ರಸ್ತೆಯಲ್ಲಿ ಸ್ಕೂಟರ್ ಹಾಗೂ ಲಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್‌ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಂಜುನಾಥ್‌(24) ಗಾಯಗೊಂಡವರು.

ಗುರುವಾರ ಮಧ್ಯಾಹ್ನ 3.45ರ ಸುಮಾರಿಗೆ ನೈಸ್‌ ರಸ್ತೆ ಕಡೆಯಿಂದ ಲಾರಿ ವೇಗವಾಗಿ ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರ ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ಗಾಯಗೊಂಡ ಮಂಜುನಾಥ್‌ ಅವರನ್ನು ಜೈನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.

ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು. ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.