ಬೆಂಗಳೂರು: ಮಕ್ಕಳಿಗೆ ಪ್ರವೇಶ ನೀಡುತ್ತಿರುವ ಪಬ್, ಹುಕ್ಕಾ ಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಯ ಪ್ರತಿನಿಧಿಗಳು ಒತ್ತಾಯಿಸಿದ್ದಾರೆ.
‘ಕೆಲ ಶಾಲಾ ಮಕ್ಕಳು ಸಮವಸ್ತ್ರದಲ್ಲೇ ಬೆಂಗಳೂರಿನ ವಿವಿಧ ಪಬ್, ಹುಕ್ಕಾ ಬಾರ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು, ನೆರೆಹೊರೆಯವರು ಕರೆ ಮಾಡಿ ತಿಳಿಸಿದ್ದರು. ಕೆಲವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಮಕ್ಕಳು ಇರುವುದು ದೃಢಪಟ್ಟಿದೆ. ಇಂತಹ ಘಟನೆಗಳು ಶಾಲಾ ಆಡಳಿತ ಮಂಡಳಿಗಳಿಗೆ ಆಘಾತ ತಂದಿವೆ’ ಎಂದು ಗೃಹ ಇಲಾಖೆ ಮತ್ತು ಮಕ್ಕಳ ರಕ್ಷಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ವಿವರಿಸಿದ್ದಾರೆ.
‘ಪ್ರಕರಣಗಳು ಪತ್ತೆಯಾದ ನಂತರ ಪೋಷಕರು, ಶಿಕ್ಷಕರ ಸಭೆ ಕರೆದು ಚರ್ಚಿಸಲಾಗಿದೆ. ಶಾಲೆ ಬಿಟ್ಟ ನಂತರ ಮಕ್ಕಳು ಮನೆಗೆ ಬರುವ ಬಗ್ಗೆ ನಿಗಾ ವಹಿಸಬೇಕು. ತಡವಾದರೆ ಪ್ರಶ್ನಿಸಬೇಕು. ಅವರ ಚಲನವಲನ ಗಮನಿಸಬೇಕು ಎಂದು ಸೂಚಿಸಿದ್ದೇವೆ’ ಎಂದಿದ್ದಾರೆ.
‘ಕೆಲ ಪಬ್, ಹುಕ್ಕಾ ಬಾರ್‌ಗಳು ಮಧ್ಯಾಹ್ನದಿಂದಲೇ ತೆರೆಯುವ ಕಾರಣ ಶಾಲೆ ಬಿಟ್ಟ ನಂತರ ಕೆಲ ಮಕ್ಕಳು ಸಮೀಪದಲ್ಲೇ ಇರುವ ಅಂತಹ ತಾಣಗಳಿಗೆ ಹೋಗುತ್ತಾರೆ. ಕೆಲ ಬಾಲಕಿಯರು ಇಂತಹ ಹವ್ಯಾಸ ರೂಢಿಸಿಕೊಂಡಿರುವುದು ಕಳವಳಕಾರಿ. ಕೆಲವರು ಮಕ್ಕಳ ಫೋಟೊ ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಡುತ್ತಾರೆ. ಇಂತಹ ನಡೆ ತಡೆಯಲು ಕಠಿಣ ನಿಯಮಗಳನ್ನು ರೂಪಿಸಬೇಕು ಎಂದು ಕೋರಿದ್ದಾರೆ.
‘ದೂರುಗಳನ್ನು ಸ್ವೀಕರಿಸಿದ್ದೇವೆ. ಮಕ್ಕಳ ಸುರಕ್ಷತೆಯ ಕುರಿತು ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದೇವೆ. ಇಂತಹ ತಾಣಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಬೇಕು. ಮಕ್ಕಳು ಪತ್ತೆಯಾದರೆ ಪರವಾನಗಿ ರದ್ದು ಮಾಡಬೇಕು’ ಎಂದು ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣ ಗೌಡ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.