ಬೆಂಗಳೂರು: ‘ಕೃಷಿಯಲ್ಲಿ ಯಂತ್ರ ಬಳಸಿ ನೋಡಿ, ಮೇಕೆಯನ್ನು ಹಾಲಿಗಾಗಿ ಸಾಕಣೆ ಮಾಡುತ್ತಲೇ ಅದರಿಂದ ಲಾಭ ಗಳಿಸಿ, ಬೆಲೆ ಕಡಿಮೆ ಇರುವಾಗ ಕೃಷಿ ಉತ್ಪನ್ನ ಮಾರದೆ ಅದನ್ನು ಬದಲಿ ಉತ್ಪನ್ನವನ್ನಾಗಿ ಮಾರ್ಪಡಿಸಿ, ರೈತನಿಗೆ ನಷ್ಟ ಆಗಲು ಸಾಧ್ಯವಿಲ್ಲ...’
ಇಲ್ಲಿನ ಜಿಕೆವಿಕೆ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ 107ನೇ ವಿಜ್ಞಾನ ಕಾಂಗ್ರೆಸ್‌ನ ನಾಲ್ಕನೇ ದಿನವಾದ ಸೋಮವಾರ ನಡೆದ ರೈತ ವಿಜ್ಞಾನ ಕಾಂಗ್ರೆಸ್‌ನಲ್ಲಿ ದೇಶದ ಹಲವೆಡೆಯಿಂದ ಬಂದ ಪ್ರಗತಿಪರ ಕೃಷಿಕರು ತಮ್ಮ ಸ್ವಂತ ಅನುಭವದ ಮೂಲಕ ನೀಡಿದ ಸಲಹೆ ಇದು.
ಮೈಸೂರಿನ ಶ್ರೀನಿವಾಸ ಆಚಾರ್ ಅವರು ಮೇಕೆ ಸಾಕಣೆಯಲ್ಲಿ ಆರಂಭದಲ್ಲಿ ಕೋಟಿಗಟ್ಟಲೆ ನಷ್ಟ ಅನುಭವಿಸಿದವರು. ಆದರೆ ಮೇಕೆಯನ್ನು ಕೊಲ್ಲಲಿರುವ ಪ್ರಾಣಿ ಎಂದು ಭಾವಿಸದೆ, ಸಾಕಣೆ ಮಾಡಲು ಇರುವ ಪ್ರಾಣಿ ಎಂಬ ನೆಲೆಯಲ್ಲಿ ಅವರು ನಡೆಸಿದ ಪ್ರಯೋಗ ಇಂದು ಅದ್ಭುತ ಯಶಸ್ಸು ತಂದುಕೊಟ್ಟಿದೆ. ಒಂದು ಸಾವಿರ ಮೇಕೆ ಸಾಕಣೆ ಮಾಡುತ್ತಿರುವ ಅವರು, ದಿನಕ್ಕೆ 200 ಲೀಟರ್ ಮೇಕೆ ಹಾಲು ಪೂರೈಸುತ್ತಿದ್ದಾರೆ. ತುಪ್ಪ, ಹಾಲಿನ ಪುಡಿಯನ್ನೂ ತಯಾರಿಸುತ್ತಿದ್ದಾರೆ.
ಬೆಳಗಾವಿಯ ಶಿವಾನಂದ ಮಠಪತಿ ಲಿಂಬೆ, ಮಾವಿನ ಉಪ್ಪಿನಕಾಯಿ ತಯಾರಿಸಿದ್ದರ ಹಿಂದೆ ಇದ್ದುದು ಬೆಲೆ ಏರಿಳಿತದ ಸಮಸ್ಯೆ. ತಮ್ಮ ತೋಟದಲ್ಲಿ ಬೆಳೆದ ಲಿಂಬೆಗೆ ಬೆಲೆಯೇ ಸಿಗದಾಗ ಅವರು ಆರಂಭಿಸಿದ ಉಪ್ಪಿನಕಾಯಿ ವ್ಯವಹಾರ ಭಾರಿ ಯಶಸ್ಸು ಗಳಿಸಿತು. ಇಂದು ಅವರ ವಾರ್ಷಿಕ ಲಾಭದ ಪ್ರಮಾಣ ₹ 40ರಿಂದ ₹ 45 ಲಕ್ಷದಷ್ಟಿದೆ.
ಕೋಲಾರದ ರತ್ನಮ್ಮ ಸಿರಿಧಾನ್ಯಗಳ ಮೌಲ್ಯವರ್ಧನೆ ಮಾಡಿ ಜೀವನ ಕಂಡುಕೊಂಡವರು. ಸುಮಾರು 100 ಮಂದಿಗೆ ಉದ್ಯೋಗವನ್ನೂ ಒದಗಿಸಿದ್ದಾರೆ. ಆಂಧ್ರ ಪ್ರಧೇಶ ನಲಗೊಂಡದ ಇ.ವೀರಭದ್ರ ರಾವ್ ಭತ್ತದ ಬೀಜದ ನಾಟಿಯಿಂದ ತೊಡಗಿ ಕಟಾವಿನ ತನಕ ಎಲ್ಲವನ್ನೂ ಯಾಂತ್ರೀಕರಣ ಮಾಡಿ ಎಕರೆಗೆ ತಗಲುತ್ತಿದ್ದ ₹ 7 ಸಾವಿರ ವೆಚ್ಚವನ್ನು ₹3 ಸಾವಿರಕ್ಕೆ ತಗ್ಗಿಸಿದ್ದಾರೆ. ಮಹಾರಾಷ್ಟ್ರ ಜಾಲ್ನಾದ ಉದ್ಧವ್ ಆಸಾರಾಮ್ ಖೇಡೆಕರ್ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಶೇ 70ರಷ್ಟು ಕಡಿಮೆ ನೀರಾವರಿಯಿಂದ ಈರುಳ್ಳಿ ಬೆಳೆ ಬೆಳೆಸಿ ಯಶಸ್ವಿಯಾದವರು.
ಒಡಿಶಾದ ಲಂಬೋದರ್ ಬೆಹೆರಾ ಅವರು ತರಕಾರಿ ಬೆಳೆಯಲ್ಲಿ ಸರಳ ಯಂತ್ರ ಬಳಸಿ ಸಫಲತೆ ಸಾಧಿಸಿದ್ದನ್ನು ವಿವರಿಸಿದರೆ, ಪಶ್ಚಿಮ ಬಂಗಾಳದ ತುಷಾರ್ ರಾಯ್ 200 ಮೆಗಾವಾಟ್ ವಿದ್ಯುತ್ ದೀಪದ ಶಾಖದಲ್ಲೇ ಕೋಳಿ ಮರಿಗಳನ್ನು ಕಾವು ಕೊಡಿಸುವ ಇಂಕ್ಯುಬೇಟರ್ ನಿರ್ಮಿಸಿದ್ದನ್ನು ತೋರಿಸಿಕೊಟ್ಟರು. ಸಿಕ್ಕಿಂನ ದೊಮಾ ಶೆರ್ಪಾ ಅವರು ಚೆರ್ರಿ ಪೆಪ್ಪರ್ ಬಳಕೆಯಲ್ಲಿ ಬದಲಾವಣೆ ಮಾಡಿ ಯಶಸ್ಸು ಕಂಡಿದ್ದನ್ನು ತಿಳಿಸಿದರೆ, ಮೈಸೂರಿನ ಗೋಪಾ ಕುಮಾರ್ ಅವರು ಡಿಎಲ್‌ಜಿ ಸಂಸ್ಥೆಯ ಮೂಲಕ ಹಂದಿ ಸಾಕಣೆಯಲ್ಲಿ ಸುಧಾರಣೆ ತಂದಿರುವುದನ್ನು ವಿವರಿಸಿದರು. ಬೆಂಗಳೂರಿನ ಪ್ರಕಾಶ್ ಅವರು ನರ್ಸರಿಯಲ್ಲಿ ತಂದ ಸುಧಾರಣೆಗಳನ್ನು ವಿಜ್ಞಾನಿಗಳ ಗಮನಕ್ಕೆ ತಂದರು.
ಮೈಸೂರಿನ ಪ್ರಗತಿಪರ ಕೃಷಿಕ ಕೈಲಾಸ ಮೂರ್ತಿ ಅವರು ತಮ್ಮ 10 ಎಕರೆ ತೋಟದಲ್ಲಿ ಜೈವಿಕ ವೈವಿಧ್ಯ ಕಾಪಾಡಿಕೊಂಡು ಬಂದಿರುವ ಬಗೆಯನ್ನು ತೋರಿಸಿಕೊಟ್ಟರು.
ರೈತರಿಗೆ ಸಂಶಯ: ನಮ್ಮ ಯಶಸ್ಸಿನ ಕತೆ ಹೇಳುತ್ತ ಕೃಷಿ ಉತ್ಪಾದನೆಯನ್ನು ದ್ವಿಗುಣಗೊಳಿಸಬಹುದು ಎಂದು ಸರ್ಕಾರ ಭಾವಿಸಿದಂತಿದೆ, ಆದರೆ ಅದು ಅಷ್ಟು ಸುಲಭವಲ್ಲ. ಇದಕ್ಕೆ ಬಹಳ ದೊಡ್ಡ ತಯಾರಿ ಬೇಕು, ಸಾಮುದಾಯಿಕ ಪ್ರಯತ್ನವೂ ಅಗತ್ಯ ಎಂದು ಕೆಲವು ಯಶಸ್ವಿ ಕೃಷಿಕರು ಬಳಿಕ ತಮ್ಮ ಅನಿಸಿಕೆ ಹಂಚಿಕೊಂಡರು.
ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಉಪ ಮಹಾನಿರ್ದೇಶಕರಾದ ಡಾ.ಎ.ಕೆ.ಸಿಂಗ್, ಆರ್.ಸಿ.ಅಗರ್‌ವಾಲ್ ಮುಂದಿನ ವರ್ಷಗಳಲ್ಲಿ ಕೃಷಿ ವಿಜ್ಞಾನ ಕಾಂಗ್ರೆಸ್ ಅನ್ನು ವಿಜ್ಞಾನ ಕಾಂಗ್ರೆಸ್‌ನಲ್ಲಿ ಶಾಶ್ವತವಾಗಿ ಸೇರ್ಪಡೆಗೊಳಿಸುವ ಇಂಗಿತ ವ್ಯಕ್ತಪಡಿಸಿದರು.
ರೈತ ಸಂಶೋಧನಾ ನಿಧಿ ಸ್ಥಾಪನೆ
ಗ್ರಾಮೀಣ ಕೃಷಿ ಆದಾಯ ಹೆಚ್ಚಿಸಲು, ರೈತರ ಶೋಧನೆಯನ್ನು ಉತ್ತೇಜಿಸುವ ಸಲುವಾಗಿ ರೈತ ಸಂಶೋಧನಾ ನಿಧಿ ಸ್ಥಾಪಿಸಲಾಗುತ್ತಿದ್ದು, ನವದೆಹಲಿಯಲ್ಲಿ ರೈತ ಸಂಶೋಧನಾ ಕೇಂದ್ರವನ್ನೂ ಸ್ಥಾಪಿಸಲಾಗುವುದು ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಮಹಾ ನಿರ್ದೇಶಕ ತ್ರಿಲೋಚನ ಮಹಾಪಾತ್ರ ಹೇಳಿದರು.
ದೇಶದಲ್ಲಿ 104 ಕೃಷಿ ಸ್ಟಾರ್ಟ್‌ಅಪ್‌ಗಳು ಯಶಸ್ವಿಯಾಗಿವೆ. 45 ಬಗೆಯ ಸಾವಯವ ಕೃಷಿ ಪದ್ಧತಿಯನ್ನು ಉತ್ತೇಜಿಸಲಾಗಿದೆ. ರಾಸಾಯನಿಕ ಗೊಬ್ಬರ ಬಳಕೆಯನ್ನು ಶೇ 25ರಷ್ಟು ಕಡಿತಗೊಳಿಸುವ ಗುರಿ ಇದೆ ಎಂದರು.
ರಾಗಿ, ಜೋಳ ರಾಶಿ ಮಾಡುವ ಯಂತ್ರ ಏಕಿಲ್ಲ?
‘ರಾಜ್ಯದ ದಕ್ಷಿಣ ಭಾಗದ ಆಹಾರ ರಾಗಿ, ಉತ್ತರ ಭಾಗದ ಆಹಾರ ಜೋಳ. ಆದರೆ ಈ ಎರಡೂ ಧಾನ್ಯಗಳನ್ನು ರಾಶಿ ಹಾಕುವಂತಹ ಯಂತ್ರವನ್ನು ಇನ್ನೂ ಕಂಡುಹಿಡಿದಿಲ್ಲವಲ್ಲ’ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನ ಗೌಡ ಬೆಳಗುರ್ಕಿ ಬೇಸರ ವ್ಯಕ್ತಪಡಿಸಿದರು.
‘ಈರುಳ್ಳಿ ಬೆಲೆ ಭಾರಿ ಏರಿಳಿತ ಕಾಣುತ್ತಿದೆ, ಆದರೆ ಈರುಳ್ಳಿಯನ್ನು ಸಂಗ್ರಹಿಸಿ ಇಡುವ ವ್ಯವಸ್ಥೆ ಇಲ್ಲ, ಕೃಷಿಯಲ್ಲಿ ಪ್ರಗತಿ ಕಾಣಬೇಕಿದ್ದರೆ ಇಂತಹ ಹಲವಾರು ವಿಷಯಗಳ ಬಗ್ಗೆ ವಿಜ್ಞಾನ ಜಗತ್ತು ಬೇಗನೆ ಪರಿಹಾರ ಕಂಡುಕೊಳ್ಳಬೇಕು’ ಎಂದರು.
***
ಅಡಿಕೆಯಿಂದ ಮರೆಗುಳಿ (ಅಲ್ಜೆಮೈರ್) ಕಾಯಿಲೆ ಗುಣಪಡಿಸಬಹುದು ಎಂಬ ವಿಷಯ ಕೇಳಿ ಅಚ್ಚರಿಯಾಯಿತು. ಅಡಿಕೆ ಬೆಳೆಗೆ ಉತ್ತೇಜನ ನೀಡಲಾಗುವುದು
–ತ್ರಿಲೋಚನ ಮಹಾಪಾತ್ರ, ಮಹಾನಿರ್ದೇಶಕ, ಐಸಿಎಆರ್
ಮೇಕೆಯನ್ನು ಕೊಲ್ಲಲಿರುವ ಪ್ರಾಣಿ ಎಂದು ಭಾವಿಸದೆ, ಸಾಕಣೆ ಮಾಡಲು ಇರುವ ಪ್ರಾಣಿ ಎಂಬ ನೆಲೆಯಲ್ಲಿ ಸಲಹಿದರೆ ಅದ್ಭುತ ಯಶಸ್ಸು ನಿಶ್ಚಿತ
–ಶ್ರಿನಿವಾಸ ಆಚಾರ್ಯ, ಮೈಸೂರು
ಸಿರಿಧಾನ್ಯಗಳ ಮೌಲ್ಯವರ್ಧನೆ ಮಾಡಿ ಜೀವನ ಕಂಡುಕೊಳ್ಳಬಹುದು. ಸುಮಾರು 100 ಮಂದಿಗೆ ಉದ್ಯೋಗ ಒದಗಿಸುವುದೂ ಸಾಧ್ಯವಾಗಿದೆ
–ರತ್ನಮ್ಮ, ಕೋಲಾರ
ಲಿಂಬೆಗೆ ಬೆಲೆಯೇ ಸಿಗದಾಗ ನಾನು ಉಪ್ಪಿನಕಾಯಿ ವ್ಯವಹಾರ ಆರಂಭಿಸಿದೆ. ಯಾಂತ್ರೀಕರಣವನ್ನೂ ಮಾಡಿದೆ. ಅದು ಕೈಹಿಡಿದಿದೆ
–ಶಿವಾನಂದ ಮಠಪತಿ, ಬೆಳಗಾವಿ
ಜಗತ್ತಿನಲ್ಲಿ ಜನ ಅತಿ ಹೆಚ್ಚು ಸೇವಿಸುವುದು ಹಂದಿ ಮಾಂಸ. ಶುಚಿಯಾದ ವಾತಾವರಣದಲ್ಲಿ ಬೆಳೆಸುವುದನ್ನು ಡಿಎಲ್‌ಜಿ ಸಂಸ್ಥೆಯ ಮೂಲಕ ಸಾಬೀತುಪಡಿಸಲಾಗಿದೆ
–ಗೋಪಾಲ್ ಕುಮಾರ್, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.