ADVERTISEMENT

ವಿಜ್ಞಾನದ ಮಾಹಿತಿ ಕನ್ನಡದಲ್ಲಿ ಸಿಗಲಿ: ಸಾಹಿತಿ ಚಂದ್ರಶೇಖರ ಕಂಬಾರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2023, 14:26 IST
Last Updated 19 ಅಕ್ಟೋಬರ್ 2023, 14:26 IST
ಕಾರ್ಯಕ್ರಮದಲ್ಲಿ ‘ವಿಜ್ಞಾನದೊಳಗೊಂದು ಜೀವನ’ ಕೃತಿಯನ್ನು ಚಂದ್ರಶೇಖರ ಕಂಬಾರ ಬಿಡುಗಡೆ ಮಾಡಿದರು. ಎಂ.ಎಸ್‌.ಎಸ್‌.ಮೂರ್ತಿ, ಸಿ.ಎನ್‌.ಆರ್.ರಾವ್, ಜವಾಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರದ ಅಧ್ಯಕ್ಷ  ಗಿರಿಧರ್‌ ಯು. ಕುಲಕರ್ಣಿ ಹಾಗೂ ಪ್ರಕಾಶಕ ಎ. ರಮೇಶ್ ಉಡುಪ ಇದ್ದಾರೆ.
ಕಾರ್ಯಕ್ರಮದಲ್ಲಿ ‘ವಿಜ್ಞಾನದೊಳಗೊಂದು ಜೀವನ’ ಕೃತಿಯನ್ನು ಚಂದ್ರಶೇಖರ ಕಂಬಾರ ಬಿಡುಗಡೆ ಮಾಡಿದರು. ಎಂ.ಎಸ್‌.ಎಸ್‌.ಮೂರ್ತಿ, ಸಿ.ಎನ್‌.ಆರ್.ರಾವ್, ಜವಾಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರದ ಅಧ್ಯಕ್ಷ  ಗಿರಿಧರ್‌ ಯು. ಕುಲಕರ್ಣಿ ಹಾಗೂ ಪ್ರಕಾಶಕ ಎ. ರಮೇಶ್ ಉಡುಪ ಇದ್ದಾರೆ.   

ಬೆಂಗಳೂರು: ‘ವಿಜ್ಞಾನಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಅಷ್ಟಾಗಿ ಸಾಹಿತ್ಯ ಕೃತಿಗಳಿಲ್ಲ. ಆದ್ದರಿಂದ ಈ ಕೊರತೆಯನ್ನು ವಿಜ್ಞಾನಿಗಳೇ ನಿವಾರಿಸಬೇಕು’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು. 

ಜವಾಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರ ಹಾಗೂ ನವಕರ್ನಾಟಕ ಪ್ರಕಾಶನ ಜಂಟಿಯಾಗಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿ.ಎನ್.ಆರ್. ರಾವ್ ಅವರ ಆತ್ಮಕಥನ ‘ವಿಜ್ಞಾನದೊಳಗೊಂದು ಜೀವನ’ ಕೃತಿ ಬಿಡುಗಡೆ ಮಾಡಿ, ಮಾತನಾಡಿದರು. 

‘ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಇರದಿದ್ದಾಗ ಶಿವರಾಮ ಕಾರಂತ ಅವರು ಈ ಕೊರತೆ ನೀಗಿಸಲು ಪ್ರಯತ್ನಿಸಿದರು. ಕುವೆಂಪು ಅವರು ವಿಜ್ಞಾನಕ್ಕೆ ಸಂಬಂಧಿಸಿದ ಸಾಹಿತ್ಯ ಸೃಷ್ಟಿಗೆ ಪ್ರೋತ್ಸಾಹಿಸಿದರು. ಭಾರತ ರತ್ನ ಪುರಸ್ಕೃತ ವಿಜ್ಞಾನಿ ಸಿ.ಎನ್.ಆರ್.ರಾವ್‌ ಅವರ ಆತ್ಮಕಥನ ಕನ್ನಡಕ್ಕೆ ಬಂದಿರುವುದು ನಮ್ಮ ಸುದೈವ. ಅವರನ್ನು ನೋಡಿದರೆ ಮಹಾನ್ ಋಷಿಯನ್ನು ನೋಡಿದಂತಾಗುತ್ತದೆ’ ಎಂದು ಹೇಳಿದರು. 

ADVERTISEMENT

ಉಪನ್ಯಾಸಕಿ ಹಾಗೂ ಸಿ.ಎನ್.ಆರ್. ರಾವ್ ಅವರ ಪತ್ನಿ ಇಂದುಮತಿ ರಾವ್‌, ‘‌ಆತ್ಮಕಥನವನ್ನು ಎಂ.ಎಸ್.‌ಎಸ್. ಮೂರ್ತಿ ಅವರು ಸರಳ ಕನ್ನಡದಲ್ಲಿ ಅತ್ಯಂತ ಸುಂದರವಾಗಿ ಅನುವಾದಿಸಿದ್ದಾರೆ. ಈ ಕೃತಿಯನ್ನು ಗ್ರಾಮೀಣ ಭಾಗದ ಮಕ್ಕಳಿಗೆ ತಲುಪಿಸುವ ಕಾರ್ಯವಾಗಬೇಕು’ ಎಂದರು. 

ಅನುವಾದಕ ಎಂ.ಎಸ್.‌ಎಸ್. ಮೂರ್ತಿ, ‘1700 ಸಂಶೋಧನಾ ಪ್ರಬಂಧ, 53 ಕೃತಿಗಳನ್ನು ರಚಿಸಿರುವ ಸಿ.ಎನ್.ಆರ್. ರಾವ್‌ ಅವರು ನಮಗೆಲ್ಲ ಸ್ಫೂರ್ತಿಯಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.