ADVERTISEMENT

ರೋಗಿಗಳಿಗೆ ಸ್ಕೌಟ್ಸ್‌ – ಗೈಡ್ಸ್‌ನಿಂದ ಸೇವೆ

ಆಮ್ಲಜನಕ, ಔಷಧ, ಆಹಾರ ವಿತರಣೆ: ಜನರ ಸೇವೆಯಲ್ಲಿ ಸ್ವಯಂಸೇವಕರು

​ಪ್ರಜಾವಾಣಿ ವಾರ್ತೆ
Published 23 ಮೇ 2021, 20:45 IST
Last Updated 23 ಮೇ 2021, 20:45 IST
ಅಗತ್ಯವಿರುವವರಿಗೆ ಆಹಾರ ಪೊಟ್ಟಣ ವಿತರಿಸುತ್ತಿರುವ ಸ್ಕೌಟ್ಸ್‌ ವಿದ್ಯಾರ್ಥಿ
ಅಗತ್ಯವಿರುವವರಿಗೆ ಆಹಾರ ಪೊಟ್ಟಣ ವಿತರಿಸುತ್ತಿರುವ ಸ್ಕೌಟ್ಸ್‌ ವಿದ್ಯಾರ್ಥಿ   

ಬೆಂಗಳೂರು: ಕೋವಿಡ್‌ ಪರಿಹಾರ ಕಾರ್ಯಗಳಲ್ಲಿ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಸಂಸ್ಥೆಯ ರಾಜ್ಯ ಘಟಕವು ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದೆ.

ಅಗತ್ಯವಿರುವವರಿಗೆ ಆಮ್ಲಜನಕ ಸಾಂದ್ರಕಗಳು, ಔಷಧ, ಆಹಾರದ ಕಿಟ್‌ಗಳನ್ನು ಪೂರೈಸುವುದು ಮಾತ್ರವಲ್ಲದೆ, ಕೋವಿಡ್‌ ಕುರಿತ ಜಾಗೃತಿ ಕಾರ್ಯಕ್ರಮಗಳಲ್ಲಿಯೂಸಂಸ್ಥೆಯ ಸ್ವಯಂ ಸೇವಕರು ಪ್ರತಿಫಲಾಪೇಕ್ಷೆ ಇಲ್ಲದೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಸುಮಾರು 6.5 ಲಕ್ಷ ವಿದ್ಯಾರ್ಥಿಗಳು ಸಂಸ್ಥೆಯ ಅಡಿ ನೋಂದಾಯಿಸಿಕೊಂಡಿದ್ದರೂ, 18 ವರ್ಷಕ್ಕಿಂತ ಮೇಲ್ಪಟ್ಟ ಸ್ವಯಂ ಸೇವಕರನ್ನು ಕೋವಿಡ್ ಸೇವಾ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ.ಪ್ರತಿ ಜಿಲ್ಲೆಯಲ್ಲಿ ಸುಮಾರು 100 ವಿದ್ಯಾರ್ಥಿಗಳು ಕೆಲಸ ಮಾಡುತ್ತಿದ್ದಾರೆ.

ADVERTISEMENT

’ಸಂಸ್ಥೆಗೆ ಸದ್ಯ 22 ಸಾಂದ್ರಕಗಳು ಬೆಂಗಳೂರಿಗೆ ಬಂದಿವೆ. ಒಂದು ಸಾಂದ್ರಕಕ್ಕೆ ₹70 ಸಾವಿರ ಆಗುತ್ತದೆ. ರೆಡ್‌ಕ್ರಾಸ್‌ನವರು ನಾಲ್ಕು ನೀಡಿದ್ದಾರೆ. ಇಂತಹ 100 ಸಾಂದ್ರಕಗಳನ್ನು ಸಂಗ್ರಹಿಸುವ ಗುರಿ ಇದೆ. ಸದ್ಯ, ಬೆಂಗಳೂರಿನಲ್ಲಿ ಅಗತ್ಯವಿರುವವರಿಗೆಇವುಗಳನ್ನು ಪೂರೈಸಲಾಗುತ್ತಿದೆ’ ಎಂದು ಸಂಸ್ಥೆಯ ರಾಜ್ಯಘಟಕದ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ‘ಪ್ರಜಾವಾಣಿ‘ ಗೆ ತಿಳಿಸಿದರು.

ಔಷಧ, ಆಹಾರ ವಿತರಣೆ: ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಂಸ್ಥೆಯು ನಿತ್ಯ 4 ಸಾವಿರದಿಂದ 6 ಸಾವಿರ ಆಹಾರದ ಪೊಟ್ಟಣಗಳನ್ನು ವಿತರಿಸುತ್ತಿದೆ. ಸರ್ಕಾರದ ಅನುಮತಿ ಪಡೆದೇ ಈ ಚಟುವಟಿಕೆಯನ್ನು ಸರ್ಕಾರ ನಡೆಸುತ್ತಿದೆ. ಅಲ್ಲದೆ, ಪ್ರತಿ ಜಿಲ್ಲೆಗೆ ₹50 ಸಾವಿರದಿಂದ ₹ 1 ಲಕ್ಷದವರೆಗಿನ ಮೊತ್ತದ ಔಷಧಗಳನ್ನು ಸಂಸ್ಥೆ ನೀಡುತ್ತಿದೆ.

ಮೂಡುಬಿದಿರೆಯಲ್ಲಿರುವ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಕನ್ನಡ ಭವನವನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ದಿನಕ್ಕೆ 300 ಜನರು ಇದರ ಸೌಲಭ್ಯ ಪಡೆದುಕೊಳ್ಳುತ್ತಿದ್ದು, ಔಷಧವನ್ನು ಉಚಿತವಾಗಿ ಪೂರೈಸಲಾಗುತ್ತಿದೆ. ಸ್ಕೌಟ್ಸ್‌ನ ಮೂಡುಬಿದಿರೆ ತಾಲ್ಲೂಕು ಘಟಕದ ಅಧ್ಯಕ್ಷ ಮೋಹನ್ ಆಳ್ವ ಈ ಆಸ್ಪತ್ರೆಯನ್ನುನಿರ್ವಹಿಸುತ್ತಿದ್ದಾರೆ.

ಇನ್ನು, ಬೀದರ್‌ನಲ್ಲಿ ಶಾಹಿನ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮತ್ತು ಸ್ಕೌಟ್ಸ್‌ನ ಜಿಲ್ಲಾ ಅಧ್ಯಕ್ಷ ಖದೀರ್‌ ಅವರು, ಕೋವಿಡ್‌ ರೋಗಿಗಳಿಗೆ ನಿತ್ಯ 1,400 ಆಹಾರದ ಪೊಟ್ಟಣಗಳನ್ನು ಅವರ ಮನೆ ಬಾಗಿಲಿಗೇ ಒದಗಿಸುತ್ತಿದ್ದಾರೆ.

ರಕ್ತ ಪೂರೈಕೆ: ರೆಡ್‌ಕ್ರಾಸ್‌ ಸೊಸೈಟಿ ಮೂಲಕ ರಕ್ತ ಪೂರೈಸುವ ಕಾರ್ಯವನ್ನೂ ಸಂಸ್ಥೆ ಮಾಡುತ್ತಿದೆ. 1,200ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ.

’ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಜೊತೆಗೂಡಿಯೇ ನಮ್ಮ ಸಂಸ್ಥೆಯ ಸ್ವಯಂ ಸೇವಕರು ಈ ಎಲ್ಲ ಕಾರ್ಯ ಮಾಡುತ್ತಿದ್ದಾರೆ‘ ಎಂದು ಸಿಂಧ್ಯ ಹೇಳಿದರು.

ಯಾವುದೇ ನೆರವಿಗೆ ಸಂಸ್ಥೆಯ ಸಹಾಯವಾಣಿ 98864–28601 ಸಂಪರ್ಕಿಸಬಹುದು.

ಜಾಗೃತಿ ಕಾರ್ಯದಲ್ಲೂ ಮುಂದು
ಕೋವಿಡ್‌ ಕುರಿತ ಜಾಗೃತಿ ಕಾರ್ಯಕ್ರಮಗಳಲ್ಲಿಯೂ ಸಂಸ್ಥೆಯು ಮುಂದಿದೆ. ’ಕೊರೊನಾ ವೆಲ್‌ನೆಸ್‌‘ ಹೆಸರಿನಲ್ಲಿ ನಿತ್ಯ ಬೆಳಿಗ್ಗೆ 7.30ರಿಂದ 8 ಮತ್ತು ಸಂಜೆ 7.30ರಿಂದ 8 ರವರೆಗೆ ಯೋಗಾಭ್ಯಾಸದ ಮಹತ್ವದ ಕುರಿತು ತಜ್ಞರು ಆನ್‌ಲೈನ್‌ನಲ್ಲಿ ಮಾರ್ಗದರ್ಶನ ನೀಡುತ್ತಾರೆ. ದೇಶದಾದ್ಯಂತ 7 ಲಕ್ಷ ಜನ ಇದರ ಉಪಯೋಗ ಪಡೆಯುತ್ತಿದ್ದಾರೆ.

ಎಸ್‌ಎಂಎಸ್‌ (ಸ್ಯಾನಿಟೈಸರ್, ಮಾಸ್ಕ್, ಸ್ಟೀಮ್‌) ಅಭಿಯಾನದಡಿ ಸಂಸ್ಥೆಯ ಮಕ್ಕಳು 2 ನಿಮಿಷದ ವಿಡಿಯೊ ಮಾಡಿ, ಈ ಕ್ರಮಗಳ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಇಂತಹ 25 ಸಾವಿರ ವಿಡಿಯೊಗಳನ್ನು ಸ್ವಯಂ ಸೇವಕರು ಮಾಡಿದ್ದಾರೆ. ಇನ್ನು, ಲಸಿಕೆ ಅಭಿಯಾನ ಮತ್ತಿತರ ಅಂಶಗಳ ಬಗ್ಗೆ ಸಂಸ್ಥೆಯು ವಾರದಲ್ಲಿ ಎರಡು ಬಾರಿ ವೆಬಿನಾರ್ ಕೂಡ ಆಯೋಜಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.