ಬೆಂಗಳೂರು: ಲಾಕ್‌ಡೌನ್‌ನಿಂದ ಸಂತ್ರಸ್ತರಾಗಿರುವ ರಾಜ್ಯದ ವಲಸಿಗರಿಗೆ ಸುಭದ್ರ ಬದುಕು ಕಲ್ಪಿಸಲು ಮುಂದಾಗಿರುವಸೆಲ್ಕೊ ಫೌಂಡೇಷನ್, ಇದಕ್ಕಾಗಿ ₹2 ಕೋಟಿ ಮೊತ್ತದ ವಿಶೇಷ ಯೋಜನೆ ರೂಪಿಸಿದೆ.
‘ಅಭದ್ರತೆಯಿಂದ ಕಂಗಾಲಾಗಿರುವ ವಲಸಿಗರಿಗೆ ಅವರ ಪರಿಣತಿಯ ಕ್ಷೇತ್ರದಲ್ಲಿಯೇ ಉದ್ಯೋಗ ಭರವಸೆ ಮೂಡಿಸಿ ಅವರಲ್ಲಿ ನಿರಂತರ ಜೀವನೋತ್ಸಾಹ ತುಂಬುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ’ ಎಂದು ಫೌಂಡೇಷನ್‌ನ ಮುಖ್ಯಸ್ಥ ಡಾ. ಹರೀಶ್ ಹಂದೆ ತಿಳಿಸಿದ್ದಾರೆ.
‘ರಾಜ್ಯದ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ವಲಸಿಗರಲ್ಲಿ ಸುಮಾರು ನೂರಕ್ಕೂ ಹೆಚ್ಚು ಅತ್ಯಂತ ಅಗತ್ಯವಿರುವ ಹಳ್ಳಿ,
ಸಣ್ಣ ಪಟ್ಟಣಗಳ ಕೊಳೆಗೇರಿಗಳಲ್ಲಿರುವ ಕಾರ್ಮಿಕರು, ಸಣ್ಣ ಸಣ್ಣ ಅಂಗಡಿ ಇಟ್ಟುಕೊಂಡವರು ಅಥವಾ ಕುಶಲಕರ್ಮಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ಅವರಿಗೆ ಸುಮಾರು ₹50 ಸಾವಿರದಿಂದ ₹2 ಲಕ್ಷದವರೆಗೆ ಬಂಡವಾಳ ನೀಡಲಾಗುತ್ತದೆ’ ಎಂದು ಹೇಳಿದ್ದಾರೆ.
‘ಅಗತ್ಯ ಬಂಡವಾಳ ಒದಗಿಸುವುದರ ಜೊತೆಗೆ, ಕೋವಿಡ್ ನಂತರಅವರ ವೃತ್ತಿಯ ಸ್ವರೂಪ ಹೇಗಿರಬೇಕೆಂದು ತಿಳಿಸಲಾಗುತ್ತದೆ. ಇದಕ್ಕಾಗಿಯೇ ವಿಶೇಷ ತಜ್ಞರ ತಂಡ ಅವರ ಅಗತ್ಯಗಳನ್ನು ಪರಿಶೀಲಿಸಿ ನೆರವು ನೀಡಲಿದೆ’ ಎಂದು ವಿವರಿಸಿದ್ದಾರೆ.
ಕೈಜೋಡಿಸಿ: ‘ಪ್ರಾಯೋಗಿಕವಾಗಿ ₹2 ಕೋಟಿ ಮೊತ್ತವನ್ನು ನಾವು ಈ ಯೋಜನೆಗೆ ತೆಗೆದಿರಿಸಿದ್ದೇವೆ. ಇದು ಭವಿಷ್ಯದ ಸಹಜ ಕ್ರಮ ಆಗಬೇಕೆಂಬುದು ನಮ್ಮ ಉದ್ದೇಶ. ಇದಕ್ಕಾಗಿ,ಮುಖ್ಯಮಂತ್ರಿ ಹಾಗೂ ಎಲ್ಲ ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಕೈಜೋಡಿಸಿದರೆ ವಲಸಿಗರ ಬದುಕನ್ನು ಸುಭದ್ರಗೊಳಿಸಬಹುದು’ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.