ಬೆಂಗಳೂರು: ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿ ಮಾರಾಟ ಮಾಡಿಕೊಡುವ ಸರ್ಕಾರ ನಿರ್ಧಾರಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಈ ತೀರ್ಮಾನದ ಮರು ಪರಿಶೀಲನೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ.
ಭೂಮಿ ಮಾರಾಟದ ವಿವಾದಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಮತ್ತು ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಮಂಗಳವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ಸಂಬಂಧ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ‘ಜಿಂದಾಲ್‌ಗೆ ಭೂಮಿ ಮಾರಾಟ ಮಾಡುವ ವಿಷಯದ ಕುರಿತು ಇಂದು ಪರಮೇಶ್ವರ ಹಾಗೂ ಜಾರ್ಜ್ ಜತೆ ಚರ್ಚಿಸಿದ್ದೇನೆ. ತೀರ್ಮಾನ ಮರುಪರಿಶೀಲನೆ ಮಾಡಲು ಸಂಪುಟ ಸಭೆಗೆ ಪುನಃ ಕಡತ ಮಂಡಿಸುವಂತೆ ಸೂಚಿಸಿದ್ದೇನೆ’ ಎಂದಿದ್ದಾರೆ.
ಜಮೀನು ಮಾರಾಟದಿಂದ ಆಗುವ ಸಾಧಕ– ಬಾಧಕಗಳ ಬಗ್ಗೆ ಪರಾಮರ್ಶೆ ನಡೆಸಲು ಸಂಪುಟ ಉಪಸಮಿತಿಯೊಂದನ್ನು ರಚಿಸುವ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳುತಿಳಿಸಿವೆ.
‘ಜಿಂದಾಲ್‌ಗೆ ಭೂಮಿ ಮಾರಾಟದಲ್ಲಿ ಸಂಶಯಕ್ಕೆ ಆಸ್ಪದವಿಲ್ಲ. ಹಗರಣವೂ ನಡೆದಿಲ್ಲ. ಎಲ್ಲವೂ ಕಾನೂನು ಪ್ರಕಾರವೇ ನಡೆದಿದೆ’ ಎಂದು ಜಾರ್ಜ್ ಅವರು ದಾಖಲೆಗಳ ಸಮೇತ ಮುಖ್ಯಮಂತ್ರಿಯವರಿಗೆ ವಿವರಿಸಿದರು.
ಜಮೀನು ಮಾರಾಟಕ್ಕೆ ಸಂಬಂಧಿಸಿದ ಕಡತಗಳನ್ನು ತರಿಸಿಕೊಂಡು ಸ್ವತಃ ಅಧ್ಯಯನ ನಡೆಸಲು ಮುಖ್ಯಮಂತ್ರಿಯವರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ...ಜಿಂದಾಲ್‌ಗೆ ಭೂಮಿ: ಲಾಭ ಯಾರಿಗೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.