ಬೆಂಗಳೂರು: ಪ್ರತಿಷ್ಠಿತ ಕಂಪನಿಗಳ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ಬಟ್ಟೆ ಮಾರಾಟ ಮಾಡುತ್ತಿದ್ದ ಗೋಮಾದಮುಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ₹1.50 ಕೋಟಿ ಮೌಲ್ಯದ ನಕಲಿ ಬಟ್ಟೆ ಜಪ್ತಿ ಮಾಡಿಕೊಂಡಿದ್ಧಾರೆ.
ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟೇಲ್ ಎಕ್ಸ್‌ಪರ್ಟ್ ಹಾಗೂ ಆರ್.ಬಿ.ಫ್ಯಾಷನ್ ಗೋದಾಮಗಳ ಮೇಲೆ ದಾಳಿ ನಡೆಸಿದ ಪೊಲೀಸರು, ಒಟ್ಟು 6,500 ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ಧಾರೆ.
ಗೋದಾಮು ಮಾಲೀಕ ಭರತ್ ಕುಮಾರ್ ಮತ್ತು ರಾಧಾ ಎಂಬುವರನ್ನು ಬಂಧಿಸಲಾಗಿದೆ.
ಗ್ರಾಹಕರಿಗೆ ಲೆವಿಸ್, ಪೊಲೊ ಸೇರಿದಂತೆ ಪ್ರತಿಷ್ಠಿತ ಕಂಪನಿಗಳ ಬ್ಯಾಡ್ಜ್ ಬಳಸಿ ನಕಲಿ ಬಟ್ಟೆಗಳಿಗೆ ಅಂಟಿಸಿ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ಸುಧಾಮನಗರ, ಎಸ್.ಆರ್. ನಗರ, ಮಾಗಡಿ ರಸ್ತೆ, ಬೇಗೂರು ಸೇರಿ ಇತರೆ ಗೋದಾಮುಗಳಲ್ಲಿ ಪ್ರತಿಷ್ಠಿತ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ಬಟ್ಟೆಗಳನ್ನು ಸಿದ್ಧ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದರು.
ನಕಲಿ ಟೀ ಪುಡಿ: ಟಾಟಾ ಕಂಪನಿಯ ಟೀ ಪುಡಿಯನ್ನು ನಕಲಿ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶಿವಾಜಿನಗರ ನಿವಾಸಿ 34 ವರ್ಷದ ವ್ಯಕ್ತಿ ಬಂಧಿತ ಆರೋಪಿ.
ಆರೋಪಿ ಶಿವಾಜಿನಗರದ ಸ್ಟ್ರೀಟ್ ವಾಲ್ ಮಸೀದಿ ರಸ್ತೆಯಲ್ಲಿ ಟಾಟಾ ಕಂಪನಿಯ ಅಗ್ನಿ ಟೀ ಪುಡಿಯನ್ನು ನಕಲಿ ಮಾಡಿ, ಅಸಲಿ ಎಂದು ಮಾರಾಟ ಮಾಡುತ್ತಿದ್ದ. ಆರೋಪಿಯಿಂದ ₹ 1.26 ಲಕ್ಷ ಮೌಲ್ಯದ 1 ಕೆ.ಜಿ. 250 ಗ್ರಾಂ ಪ್ಯಾಕೆಟ್‌ಗಳಿರುವ ಒಟ್ಟು 450 ಕೆ.ಜಿ ಟೀ ಪುಡಿ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.