ADVERTISEMENT

ನಕಲಿ ಸ್ಟಿಕ್ಟರ್‌ ಅಂಟಿಸಿ ಮಾರಾಟ: ₹1 ಕೋಟಿ ಮೌಲ್ಯದ ಪದಾರ್ಥಗಳು ಜಪ್ತಿ

₹1 ಕೋಟಿ ಮೌಲ್ಯದ ವಿದೇಶಿ ಚಾಕೊಲೇಟ್‌, ಪಾನೀಯ, ಬಿಸ್ಕತ್‌ ಜಪ್ತಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 23:30 IST
Last Updated 10 ಜುಲೈ 2024, 23:30 IST
ನರೇಂದ್ರ ಸಿಂಗ್  
ನರೇಂದ್ರ ಸಿಂಗ್     

ಬೆಂಗಳೂರು: ವಿದೇಶಿ ಚಾಕೊಲೇಟ್‌, ಬಿಸ್ಕತ್‌ ಹಾಗೂ ಪಾನೀಯವನ್ನು ಅಕ್ರಮವಾಗಿ ಆಮದು ಮಾಡಿಕೊಂಡು ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ(ಎಫ್‌ಎಸ್‌ಎಸ್‌ಎಐ) ನಕಲಿ ಸ್ಟಿಕ್ಕರ್‌ ಅಂಟಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ(ಆರ್ಥಿಕ ಅಪರಾಧ ದಳ) ಪೊಲೀಸರು ಬುಧವಾರ ಬಂಧಿಸಿದ್ದಾರೆ. 

ರಾಜಸ್ಥಾನದ ನರೇಂದ್ರ ಸಿಂಗ್‌(45) ಬಂಧಿತ ಆರೋಪಿ.

‘ಆರೋಪಿಯಿಂದ ವಿವಿಧ ವಿದೇಶಿ ಕಂಪನಿಗಳ ₹1ಕೋಟಿ ಮೌಲ್ಯದ ಚಾಕೊಲೇಟ್‌ ಹಾಗೂ ಇತರೆ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

ADVERTISEMENT

‘ವಿದೇಶದಿಂದ ಚಾಕೊಲೇಟ್ ಆಮದು ಮಾಡಿಕೊಂಡು ಸುಧಾಮನಗರದ ಗೋದಾಮು ಒಂದರಲ್ಲಿ ಆರೋಪಿ ದಾಸ್ತಾನು ಮಾಡಿಕೊಂಡಿದ್ದರು. ನಗರದ ಹಲವಾರು ಸೂಪರ್ ಮಾರುಕಟ್ಟೆ ಹಾಗೂ ಮಾಲ್‌ಗಳಿಗೆ ವಿದೇಶಿ ಚಾಕೊಲೇಟ್‌, ಬಿಸ್ಕತ್‌ ಹಾಗೂ ಪಾನೀಯವನ್ನು ಪೂರೈಸಿ, ಹಣ ಸಂಪಾದನೆ ಮಾಡುತ್ತಿದ್ದರು. ಗೋದಾಮಿನ ಮೇಲೆ ದಾಳಿ ನಡೆಸಿದಾಗ ಅಕ್ರಮ ನಡೆಸುತ್ತಿರುವುದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಚಾಕೊಲೇಟ್‌ಗಳನ್ನು ಎಫ್‌ಎಸ್‌ಎಸ್‌ಎಐನ ನಿಯಮಾನುಸಾರ ತಯಾರಿಸಿರಲಿಲ್ಲ. ಸ್ಥಳಕ್ಕೆ ಭೇಟಿ ನೀಡಿದ್ದ ಆಹಾರ ಇಲಾಖೆಯ ಉಪ ನಿರ್ದೇಶಕರು, ಆರೋಪಿ ನಕಲಿ ಸ್ಟಿಕ್ಕರ್‌ ಅಂಟಿಸಿ ಮಾರಾಟ ಮಾಡುತ್ತಿರುವುದನ್ನು ದೃಢಪಡಿಸಿದ್ದಾರೆ. ಆರೋಪಿ ವಿದೇಶದಿಂದ ಚಾಕೊಲೇಟ್ ಅನ್ನು ಭಾರತಕ್ಕೆ ಆಮದು ಮಾಡಿಕೊಂಡಿರುವುದು ಹಾಗೂ ಸುಂಕ ಪಾವತಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಇಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಯು ಹಡಗಿನ ಮೂಲಕ ಮುಂಬೈನ ಬಂದರಿಗೆ ಪದಾರ್ಥಗಳನ್ನು ತರಿಸಿಕೊಂಡು, ಅಲ್ಲಿಂದ ವಾಹನಗಳ ಮೂಲಕ ನಗರಕ್ಕೆ ತರಿಸಿಕೊಳ್ಳುತ್ತಿದ್ದ‌ರು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.