ಬೆಂಗಳೂರು: ಸೆಂಗೋಲ್ ಇತ್ತು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಎಲ್ಲರಿಗೂ ತಿಳಿಯಿತು ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿದರು.
ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಸತ್ತಿನ ಹೊಸ ಕಟ್ಟಡವು ಭಾರತದ ಹೆಮ್ಮೆಯ ಪ್ರತೀಕ. ಅಲ್ಲಿ ರಾಜದಂಡದ (ಸೆಂಗೋಲ್) ಪ್ರತಿಷ್ಠಾಪನೆ ಆಗಿದೆ. ಆ ಮೂಲಕ ಪ್ರಧಾನಿಯವರು ನಮ್ಮ ನಾಗರಿಕತೆಯ ಕುರಿತು ಜಾಗೃತಿ ಮೂಡಿಸುವ ಮಹತ್ವದ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.
ಮೋದಿ ಅವರ ಒಂಬತ್ತು ವರ್ಷಗಳ ಆಡಳಿತದ ಅವಧಿಯಲ್ಲಿ ದೇಶವು ಗಣನೀಯ ಪ್ರಗತಿ ಸಾಧಿಸಿದೆ. ದೇಶದ ಬಹುಪಾಲು ಜನರು ಬ್ಯಾಂಕಿಂಗ್ ವ್ಯಾಪ್ತಿಗೆ ಬಂದಿದ್ದಾರೆ. ಆರ್ಥಿಕ ಪ್ರಗತಿಯನ್ನು ಸಾಧಿಸುವ ವಿಚಾರದಲ್ಲಿ ಭಾರತದ ವಿಶ್ವಾಸಾರ್ಹತೆ ವೃದ್ಧಿಯಾಗಿದೆ ಎಂದರು.
ದೆಹಲಿಯಲ್ಲಿ ಅಧಿಕಾರಿಗಳ ವರ್ಗಾವಣೆ ಮೇಲೆ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರ ನೀಡುವ ಸುಗ್ರೀವಾಜ್ಞೆಯು ಕಾನೂನುಬದ್ಧವಾಗಿದೆ. ಸುಪ್ರೀಂ ಕೋರ್ಟ್ ಕೂಡ ಈ ಹಿಂದೆ ಅದನ್ನು ಹೇಳಿತ್ತು. ದೆಹಲಿಯಲ್ಲಿ ಭ್ರಷ್ಟಾಚಾರ ತಡೆಗಾಗಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅದನ್ನು ವಿರೋಧಿಸುತ್ತಿರುವವರು ಭ್ರಷ್ಟಾಚಾರವನ್ನು ಬೆಂಬಲಿಸುವವರು ಎಂದು ವಾಗ್ದಾಳಿ ನಡೆಸಿದರು.
ಕುಸ್ತಿಪಟುಗಳ ಪ್ರತಿಭಟನೆಯ ವಿಷಯದಲ್ಲಿ ಈ ನೆಲದ ಕಾನೂನಿನಂತೆ ಕ್ರಮ ಆಗುತ್ತಿದೆ. ಆ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
undefined undefined
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.