ADVERTISEMENT

ಸೆ.1ರಿಂದ ಬೆಂಗಳೂರು–ಹಾಸನ ರಾಷ್ಟ್ರೀಯ ಹೆದ್ದಾರಿಯ ಎನ್‌ಎಚ್‌–75 ಪ್ರಯಾಣ ದುಬಾರಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 19:26 IST
Last Updated 20 ಆಗಸ್ಟ್ 2021, 19:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೆಂಗಳೂರು–ಹಾಸನ ರಾಷ್ಟ್ರೀಯ ಹೆದ್ದಾರಿಯ (ಎನ್‌ಎಚ್‌–75) ಪ್ರಯಾಣವು ಸೆಪ್ಟೆಂಬರ್‌ 1ರಿಂದ ದುಬಾರಿಯಾಗಲಿದ್ದು, ಬಳಕೆದಾರರ ಮೇಲೆ ಹೊರೆ ಹೆಚ್ಚಲಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಹೆದ್ದಾರಿ ಶುಲ್ಕವನ್ನು ಪರಿಷ್ಕರಿಸಿದ್ದು, ಇದಕ್ಕೆ ಅಧಿಕೃತ ಮುದ್ರೆಯೂ ಬಿದ್ದಿದೆ. ಇದರಿಂದ ನಿತ್ಯ ಪ್ರಯಾಣಿಸುವವರು ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ.

ಬೆಂಗಳೂರು–ತುಮಕೂರು–ಹಾಸನ–ಶಿವಮೊಗ್ಗದ ನಡುವೆ ಪ್ರಯಾಣಿಸುವವರು ನೆಲಮಂಗಲ ಹಾಗೂ ಕರ್ಬೈಲು (ಬೆಳ್ಳೂರು ಕ್ರಾಸ್‌) ಟೋಲ್‌ ಸಂಗ್ರಹ ಕೇಂದ್ರಗಳ ಮೂಲಕ ಹಾದು ಹೋಗಬೇಕಾಗುತ್ತದೆ.

ADVERTISEMENT

ಟೋಲ್‌ ಮೂಲಕ ಸಾಗಿ ಮತ್ತೆ ಹಿಂದಕ್ಕೆ ಬರುವ ಕಾರುಗಳು ನೆಲಮಂಗಲ ಟೋಲ್‌ನಲ್ಲಿ ಇನ್ನು ಮುಂದೆ ₹65ರ ಬದಲು ₹70 ಪಾವತಿಸಬೇಕಾಗುತ್ತದೆ. ಒಂದೇ ಬಾರಿ ಟೋಲ್‌ ಸಂಗ್ರಹ ಕೇಂದ್ರದ ಮೂಲಕ ಹಾದು ಹೋಗುವ ಕಾರುಗಳು ಮೊದಲಿನಂತೆ ₹45 ಶುಲ್ಕವನ್ನಷ್ಟೇ ಪಾವತಿಸಬೇಕು. ಮಾಸಿಕ ಪಾಸ್‌ ದರವನ್ನು ₹40 ಹೆಚ್ಚಳ (₹1,390) ಮಾಡಲಾಗಿದೆ.

ಬಸ್‌ ಮತ್ತು ಟ್ರಕ್‌ಗಳು ಒಮ್ಮೆ ಹಾದು ಹೋಗುವ ಶುಲ್ಕವನ್ನು ಕ್ರಮವಾಗಿ ₹5 ಮತ್ತು ₹10ರಷ್ಟು ಏರಿಸಲಾಗಿದೆ. ಮಾಸಿಕ ಪಾಸ್‌ ದರವನ್ನು ₹140 ರಷ್ಟು ಹೆಚ್ಚಿಸಲಾಗಿದೆ. ಇನ್ನು ಮುಂದೆ ಇವರು ತಿಂಗಳಿಗೆ ₹4,865 ಮೊತ್ತ ಪಾವತಿಸಬೇಕು. ಲಘು ವಾಣಿಜ್ಯ ವಾಹನಗಳ ಮಾಸಿಕ ಪಾಸ್‌ ದರವನ್ನು ₹75ರಷ್ಟು ಏರಿಸಲಾಗಿದೆ. ತಾವು ಬೆಳೆದ ತರಕಾರಿಗಳನ್ನು ನಿತ್ಯ ಮಾರುಕಟ್ಟೆಗೆ ಸಾಗಿಸುವ ರೈತರ ಮೇಲೆ ಇದರಿಂದ ಹೊರೆ ಹೆಚ್ಚಬಹುದು ಎಂದು ಹೇಳಲಾಗಿದೆ.

‘ಕೋವಿಡ್‌ನಿಂದಾಗಿ ಜನರ ಬದುಕು ತತ್ತರಿಸಿದೆ. ಹೀಗಾಗಿ ಸರ್ಕಾರವು ಕೂಡಲೇ ಹೆದ್ದಾರಿ ಶುಲ್ಕ ಪರಿಷ್ಕರಣೆ ನಿರ್ಧಾರ ಕೈಬಿಡಬೇಕು. ಅಥವಾ ಇನ್ನು ಎರಡು ವರ್ಷ ಇದನ್ನು ಮುಂದೂಡಬೇಕು. ಟ್ಯಾಕ್ಸಿ, ಲಾರಿ ಹಾಗೂ ಟ್ರಕ್‌ಗಳು ಒಂದೆಡೆಯಿಂದ ಮತ್ತೊಂದೆಡೆಗೆ ಸರಕು ಸಾಗಾಣೆ ಮಾಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಹರಿದುಬರುತ್ತಿದೆ. ಕೋವಿಡ್‌ನಿಂದಾಗಿ ಟ್ರಾವೆಲ್ಸ್‌ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹುತೇಕರು ಲಾರಿ, ಟ್ರಕ್‌ಗಳನ್ನು ರಸ್ತೆಗಿಳಿಸಲೂ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸರ್ಕಾರ ತನ್ನ ನಿರ್ಧಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು’ ಎಂದು ರಾಜ್ಯ ಟ್ರಾವೆಲ್ಸ್‌ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.