ADVERTISEMENT

ಪ್ರತ್ಯೇಕ ಅ‍ಪಘಾತ ಪ್ರಕರಣ: ಗಾಲ್ಫ್‌ ಕೋಚ್‌, ಬ್ಯಾಂಕ್‌ ಉದ್ಯೋಗಿ ಸಾವು

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 15:38 IST
Last Updated 22 ಜನವರಿ 2024, 15:38 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ನಗರದ ಕಾಮಾಕ್ಷಿಪಾಳ್ಯ ಹಾಗೂ ಕೆಂಗೇರಿ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಅ‍ಪಘಾತ ಪ್ರಕರಣಗಳಲ್ಲಿ ಬ್ಯಾಂಕ್‌ ಉದ್ಯೋಗಿ ಹಾಗೂ ಗಾಲ್ಫ್‌ ಕೋಚ್ ಮೃತಪಟ್ಟಿದ್ದಾರೆ.

ಸುಮನಹಳ್ಳಿ ಬಿಎಂಟಿಸಿ ಬಸ್ ಡಿಪೊ ಬಳಿಯ ಬಾಬು ಜಗಜೀವನ್ ರಾಮ್ ಸಂಶೋಧನೆ ಹಾಗೂ ತರಬೇತಿ ಕೇಂದ್ರದ ಎದುರು ಮರಕ್ಕೆ ಬೈಕ್‌ ಡಿಕ್ಕಿಯಾಗಿ ಬಿಡದಿಯ ಈಗಲ್‌ಟನ್‌ ಕ್ಲಬ್‌ನಲ್ಲಿ ಗಾಲ್ಫ್‌ ಕೋಚ್‌ ಆಗಿದ್ದ ಚಂದ್ರಶೇಖರ್ (28) ಅವರು ಮೃತಪಟ್ಟಿದ್ದಾರೆ.

ADVERTISEMENT

ಭಾನುವಾರ ರಾತ್ರಿ 10.30ರ ಸುಮಾರಿಗೆ ಚಂದ್ರಶೇಖರ್ ಹಾಗೂ ಅವರ ಸ್ನೇಹಿತ ಕಿರಣ್ ಬೈಕ್‌ನಲ್ಲಿ ತೆರಳುತ್ತಿದ್ದರು. ಕಿರಣ್‌ ಅವರು ಬೈಕ್‌ ಚಲಾಯಿಸುತ್ತಿದ್ದರು. ಹೊರವರ್ತುಲ ರಸ್ತೆಯಲ್ಲಿ ಲಗ್ಗೆರೆ ಕಡೆಯಿಂದ ಸುಮನಹಳ್ಳಿ ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳನ್ನು ಆಂಬುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅದರಲ್ಲಿ ಚಂದ್ರಶೇಖರ್‌ ಅವರು ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದರು.‌

ಅಪಘಾತಕ್ಕೆ ಕಾರಣನಾದ ಬೈಕ್‌ ಸವಾರ ಕಿರಣ್ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಮೃತರ ಸಂಬಂಧಿ ನರಸಿಂಹ ಅವರು ಕಾಮಾಕ್ಷಿಪಾಳ್ಯ ಸಂಚಾರ ಠಾಣೆಗೆ ದೂರು ನೀಡಿದ್ದಾರೆ.

ಕೆಂಗೇರಿ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ಬ್ಯಾಂಕ್‌ ಉದ್ಯೋಗಿ, ಮೈಲಸಂದ್ರದ ನಿವಾಸಿ ಧ್ರುವ (32) ಅವರು ಮೃತಪಟ್ಟಿದ್ಧಾರೆ.

ಧ್ರುವ ಅವರು ಭಾನುವಾರ ರಾತ್ರಿ 10.15ರ ಸುಮಾರಿಗೆ ಮೈಲಸಂದ್ರ 8ನೇ ಕ್ರಾಸ್ ಜಂಕ್ಷನ್ ಬಳಿ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಆಗ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬೈಕ್‌ನಿಂದ ಕೆಳಕ್ಕೆ ಬಿದ್ದಿದ್ದ ಧ್ರುವ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಅವರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.