ADVERTISEMENT

ಸರಣಿ ಅಪಘಾತ: ಬೈಕ್‌ ಸವಾರರಿಬ್ಬರ ದುರ್ಮರಣ

ಬ್ರೇಕ್ ವೈಫಲ್ಯದಿಂದ ಅಡ್ಡಾದಿಡ್ಡಿ ಚಲಿಸಿದ ಬಿಎಂಟಿಸಿ ಬಸ್

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 19:30 IST
Last Updated 6 ಜನವರಿ 2020, 19:30 IST
ಅಪಘಾತ
ಅಪಘಾತ   

ಬೆಂಗಳೂರು: ಬಿಎಂಟಿಸಿ ಬಸ್ ಬ್ರೇಕ್ ವೈಫಲ್ಯದಿಂದ ಅಡ್ಡಾದಿಡ್ಡಿಯಾಗಿ ಚಲಿಸಿ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಮಾಗಡಿ ಮುಖ್ಯರಸ್ತೆಯ ಕೊಟ್ಟಿಗೆಪಾಳ್ಯ ಇಳಿಜಾರಿನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ದಾಬಸ್‌ಪೇಟೆ ನಿವಾಸಿಗಳಾದ ಬೈಲಪ್ಪ (43) ಮತ್ತು ವಿಶ್ವಾರಾಧ್ಯ (46) ಮೃತಪಟ್ಟವರು. ಬೈಲಪ್ಪ ಅಂಚೆ ಕಚೇರಿ ಸಿಬ್ಬಂದಿಯಾಗಿದ್ದು, ವಿಶ್ವಾರಾಧ್ಯ ಖಾಸಗಿ ಕಾಲೇಜಿನಲ್ಲಿ ಕೆಲಸಕ್ಕಿದ್ದರು.

ಅಪಘಾತದಲ್ಲಿ ಆರು ಬೈಕ್‍ಗಳು, ಕಾರು ಮತ್ತು ಆಟೊ ಜಖಂಗೊಂಡಿವೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅರುಣಾ, ಬೈಕ್‌ ಸವಾರರಾದ ಅಭಿಷೇಕ್‌, ನಾಗರಾಜ್‌, ಹರ್ಷಿತ್‌ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಲಕ್ಷ್ಮೀ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗರಾಜ್‌ ಸ್ಥಿತಿ ಗಂಭೀರವಾಗಿದೆ. ಸಣ್ಣಪುಟ್ಟ ಗಾಯಗೊಂಡಿದ್ದ ಮತ್ತೊಬ್ಬರು ಚಿಕಿತ್ಸೆ ಪಡೆದು ತೆರಳಿದ್ದಾರೆ. ಪ್ರಕರಣದ ಸಂಬಂಧ ಬಸ್ ಚಾಲಕ ವೆಂಕಟೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ನಡೆಸಲಾಗಿದೆ ಎಂದು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ತಿಳಿಸಿದರು.

ADVERTISEMENT

ತಾವರೆಕೆರೆ ಸಮೀಪದ ವಡ್ಡರಹಳ್ಳಿ ಕಡೆಯಿಂದ ಮಾಗಡಿ ಮುಖ್ಯರಸ್ತೆ ಮಾರ್ಗವಾಗಿ ಕೆ.ಆರ್. ಮಾರುಕಟ್ಟೆಗೆ ತೆರಳುತ್ತಿದ್ದ ಈ ಬಸ್‌ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಸುಂಕದಕಟ್ಟೆ ಮಾರ್ಗವಾಗಿ ಬಂದು ಕೊಟ್ಟಿಗೆಪಾಳ್ಯಕ್ಕೆ ತೆರಳುವ ಇಳಿಜಾರಿನಲ್ಲಿ ಬಸ್‌ ಏಕಾಏಕಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಬ್ರೇಕ್ ವೈಫಲ್ಯವಾಗಿರುವುದು ಗೊತ್ತಾಗುತ್ತಿದ್ದಂತೆ ಚಾಲಕ ಸಮಯಪ್ರಜ್ಞೆ ಮೆರೆದಿದ್ದಾರೆ. ರಸ್ತೆಯ ಬಲಭಾಗದಲ್ಲಿ ಕಾಮಗಾರಿ ನಡೆಯುತ್ತಿದ್ದ ಸ್ಥಳದತ್ತ ಬಸ್‌ ಅನ್ನು ತಿರುಗಿಸಲು ಯತ್ನಿಸಿದ್ದಾರೆ. ಆದರೂ ನಿಯಂತ್ರಣಕ್ಕೆ ಸಿಗದೆ ಸರಣಿ ಅಪಘಾತ ಸಂಭವಿಸಿದೆ.

ಬೆಳಿಗ್ಗೆ 9 ಗಂಟೆ ವೇಳೆಗೆ ಕೊಟ್ಟಿಗೆಪಾಳ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚು ಇರುತ್ತದೆ. ಒಂದು ವೇಳೆ ಚಾಲಕ ಕಾಮಗಾರಿ ನಡೆಯುತ್ತಿದ್ದ ರಸ್ತೆಗೆ ಬಸ್ ಅನ್ನು ತಿರುಗಿಸದೆ ಎಡಭಾಗಕ್ಕೆ, ಇಲ್ಲವೇ ನೇರ ಸಂಚರಿಸಿದ್ದರೆ ಹಲವು ವಾಹನಗಳಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಯೂ ಇತ್ತು. ಆಗ ಇನ್ನಷ್ಟು ಪ್ರಾಣ ಕಳೆದುಕೊಳ್ಳುವ ಅಪಾಯ ಇತ್ತು.

‘ದುರಂತ ಸಂಭವಿಸಿದ ಸ್ಥಳದ ಎಡಭಾಗದಲ್ಲಿ ಮುತ್ತುರಾಯಸ್ವಾಮಿ ದೇವಸ್ಥಾನವಿದೆ. ಸೋಮವಾರ ವೈಕುಂಠ ಏಕಾದಶಿ ದಿನವಾಗಿದ್ದರಿಂದ ನೂರಾರು ಭಕ್ತರು ದೇವರ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದರು. ಅದೃಷ್ಟವಶಾತ್ ಬಸ್ ಬಲಭಾಗಕ್ಕೆ ಸಂಚರಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ಅಪಘಾತದ ತೀವ್ರತೆಗೆ ಬಸ್ಸಿನ ಟೈರ್‌ಗಳು ಸ್ಫೋಟಗೊಂಡಿದ್ದು, ಗಾಜುಗಳು ಪುಡಿ ಪುಡಿಯಾಗಿವೆ. ಬಸ್‍ನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡು ಗಾಜು ಒಡೆದು ಹೊರಬಂದಿದ್ದಾರೆ. ವಿಷಯ ತಿಳಿದ ತಕ್ಷಣ ಸುಕಂದಕಟ್ಟೆ ಹಾಗೂ ಸುಮ್ಮನಹಳ್ಳಿಯಲ್ಲಿ ಕರ್ತವ್ಯನಿರತರಾಗಿದ್ದ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತಕ್ಕೆ ಬಿಎಂಟಿಸಿ ಬಸ್ಸಿನ ಬ್ರೇಕ್ ವೈಫಲ್ಯ ಕಾರಣ ಎಂಬುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ. ಚಾಲಕ ವೆಂಕಟೇಶ್‌ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ವೆಂಕಟೇಶ್, ‘ಒಂದು ವಾರದಿಂದ ಬಸ್ ಬ್ರೇಕ್‌ನಲ್ಲಿ ಸಮಸ್ಯೆ ಇದೆ. ಬ್ರೇಕ್ ಸಮಸ್ಯೆಯನ್ನು ಸರಿಪಡಿಸುವಂತೆ ಡಿಪೊ ಮ್ಯಾನೇಜರ್ ಶಿವಲಿಂಗಯ್ಯ ಗಮನಕ್ಕೆ ತಂದಿದ್ದೆ. ಈ ಬಗ್ಗೆ ಅವರು ಸೂಕ್ತವಾಗಿ ಸ್ಪಂದಿಸಲಿಲ್ಲ. ಅಲ್ಲದೆ, ಬೇರೆ ವಾಹನ ಕೊಡುವಂತೆ ಕೇಳಿದ್ದೆ. ಡಿಪೊ ಅಧಿಕಾರಿಗಳು ನನ್ನ ಮನವಿಗೆ ಸ್ಪಂದಿಸಲಿಲ್ಲ. ಅದೇ ಬಸ್ ತೆಗೆದುಕೊಂಡು ಹೋಗು, ಏನು ಆಗುವುದಿಲ್ಲ ಎಂದು ಹೇಳಿದ್ದರು. ಬ್ರೇಕ್ ಸಮಸ್ಯೆ ಬಗ್ಗೆ ಡಿಪೊನಲ್ಲಿನ ಲೆಡ್ಜರ್ ಬುಕ್‌ನಲ್ಲಿ ನಮೂದಿಸಿದ್ದೇನೆ’ ಎಂದು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ ರವಿಕಾಂತೇಗೌಡ, ‘ಸಾರಿಗೆ ಅಧಿಕಾರಿಗಳು (ಆರ್‌ಟಿಒ) ಪರಿಶೀಲಿಸಿದ ನಂತರವಷ್ಟೇ ಅಪಘಾತಕ್ಕೆ ಕಾರಣ ಗೊತ್ತಾಗಲಿದೆ’ ಎಂದರು.

ಸಂಚಾರ ದಟ್ಟಣೆ: ಘಟನೆಯಿಂದ ಸುಮನಹಳ್ಳಿ, ಕೊಟ್ಟಿಗೆಪಾಳ್ಯ, ಮಾಗಡಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಅಪಘಾತದ ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದು, ವಾಹನಗಳ ಸಂಚಾರ ಸಹ ಸ್ಥಗಿತಗೊಂಡಿತ್ತು. ಸುಮಾರು ನಾಲ್ಕೈದು ಕಿ.ಮೀ. ವರೆಗೆ 2–3 ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಸಾರ್ವಜನಿಕರ ಗುಂಪು ಚದುರಿಸಿ, ಅಪಘಾತದಲ್ಲಿ ಜಖಂಗೊಂಡಿದ್ದ ವಾಹನ ತೆರವುಗೊಳಿಸಿದರು.

ತಲಾ ₹ 25 ಸಾವಿರ ಪರಿಹಾರಧನ

ಘಟನಾ ಸ್ಥಳಕ್ಕೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಮತ್ತು ಅಧಿಕಾರಿಗಳು ಭೇಟಿ ನೀಡಿದರು. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಬಿಎಂಟಿಸಿ ತಲಾ ₹ 25 ಸಾವಿರ ಪರಿಹಾರ ಘೋಷಿಸಿದೆ. ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನೂ ಭರಿಸಲಾಗುವುದು ಎಂದೂ ಪ್ರಕಟಣೆಯಲ್ಲಿ ತಿಳಿಸಿದೆ.

‘ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು, ಡಿಪೊ ಮ್ಯಾನೇಜರ್‌ ಮತ್ತು ಸಹಾಯಕ ವರ್ಕ್‌ ಸೂಪರಿಟೆಂಡೆಂಟ್‌ ಅವರನ್ನು ಅಮಾನತುಗೊಳಿಸಲಾಗಿದೆ. ತಾಂತ್ರಿಕ ತಂಡ ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದ ಬಳಿಕ ದುರಂತಕ್ಕೆ ನಿಖರ ಕಾರಣ ಗೊತ್ತಾಗಲಿದೆ’ ಎಂದೂ ಬಿಎಂಟಿಸಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.