ಯಲಹಂಕ: ಸರ್ವರ್ ಸಮಸ್ಯೆಯಿಂದಾಗಿ, ಜಕ್ಕೂರು ಶಾಖೆಯ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಈ ತಿಂಗಳ ಪಡಿತರ ಸಮಯಕ್ಕೆ ಸರಿಯಾಗಿ ವಿತರಣೆಯಾಗದೆ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ.
ಪ್ರತಿ ತಿಂಗಳ ಆರಂಭದಲ್ಲಿ ಸಂಬಂಧಪಟ್ಟ ಆಹಾರ ಗೋದಾಮುಗಳಿಗೆ ಪಡಿತರ ವಿಲೇವಾರಿಯಾಗಿ 5ನೇ ತಾರೀಕಿನ ನಂತರ ಸಾರ್ವಜನಿಕರಿಗೆ ವಿತರಣೆಯಾಗುತ್ತಿತ್ತು. ಆದರೆ ಈ ತಿಂಗಳು 15ನೇ ತಾರೀಕು ಕಳೆದರೂ ಪಡಿತರ ವಿತರಣೆಯಾಗಿಲ್ಲ. ಜೊತೆಗೆ, ಈ ತಿಂಗಳಲ್ಲಿ ಹಬ್ಬಗಳು ಬಂದಿದ್ದರಿಂದ, ಮನೆಯಲ್ಲೂ ಆಹಾರ ಧಾನ್ಯ ಖಾಲಿಯಾಗಿ ಸಾರ್ವಜನಿಕರು ಪರದಾಡುವಂತಾಗಿದೆ.
‘ಪಡಿತರಕ್ಕಾಗಿ ಕೆಲಸಕ್ಕೂ ಹೋಗದೆ ಬೆಳಿಗ್ಗೆ 8 ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದೇನೆ. 11 ಗಂಟೆಯಾದರೂ ಪಡಿತರ ಸಿಕ್ಕಿಲ್ಲ. ನಿನ್ನೆಯೂ ಬಂದು ವಾಪಸ್ ಹೋಗಿದ್ದೆ. ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆಗೆ ಅಡಚಣೆಯಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಮನೆಯಲ್ಲಿ ದಿನಿಸಿ ಖಾಲಿಯಾಗಿದೆ. ಅತ್ತ ಕೆಲಸಕ್ಕೂ ಹೋಗದೆ ಇತ್ತ ಪಡಿತರವೂ ದೊರೆಯದೆ ಸಮಸ್ಯೆಯಾಗಿದೆ’ ಎಂದು ಸ್ಥಳೀಯ ನಿವಾಸಿ ರತ್ನಮ್ಮ ಅಳಲು ತೋಡಿಕೊಂಡರು.
‘ಪಡಿತರ ವಿತರಣೆ ವಿಳಂಬದಿಂದ ಜನರು ಪರದಾಡುವಂತಾಗಿದೆ. ಸರ್ವರ್ ಸಮಸ್ಯೆಯನ್ನು ಕೂಡಲೇ ಪರಿಹರಿಸಿ, ಸರಾಗವಾಗಿ ಪಡಿತರ ವಿತರಣೆಗೆ ಅನುವು ಮಾಡಿಕೊಡಬೇಕು’ ಎಂದು ಜಕ್ಕೂರು ನಿವಾಸಿ ಕೃಷ್ಣಪ್ಪ ಒತ್ತಾಯಿಸಿದರು.
‘ಈವರೆಗೆ ಬಳಕೆಯಲ್ಲಿದ್ದ ಎನ್.ಐ.ಸಿ ಸರ್ವರ್ ಅನ್ನು ಕೆ.ಎಸ್.ಡಿ.ಸಿ ಸರ್ವರ್ ಆಗಿ ಬದಲಾಯಿಸುವ ಸಲುವಾಗಿ ಇಡೀ ರಾಜ್ಯದಾದ್ಯಂತ ಸಮಸ್ಯೆ ಉಂಟಾಗಿದೆ. ಅದಿನ್ನೂ ಬಗೆಹರಿದಿಲ್ಲ‘ ಎಂದು ಪಡಿತರ ವಿತರಕ ಚಂದ್ರಶೇಖರ್ ತಿಳಿಸಿದರು.
‘ಜಕ್ಕೂರು ಶಾಖೆಯ ಸರ್ಕಾರಿ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಒಟ್ಟು 800 ಪಡಿತರ ಚೀಟಿಗಳಿವೆ. ಒಂದು ಚೀಟಿಗೆ ಪಡಿತರ ವಿತರಿಸಲು ಕನಿಷ್ಠ 25 ರಿಂದ 30 ನಿಮಿಷ ಬೇಕಾಗಿದೆ. ಸಮಯಕ್ಕೆ ಸರಿಯಾಗಿ ಪಡಿತರ ಬಂದಿದ್ದರೂ ಸರ್ವರ್ ಸಮಸ್ಯೆಯಿಂದಾಗಿ ಶುಕ್ರವಾರ ಮಧ್ಯಾಹ್ನದವರೆಗೆ ಕೇವಲ 42 ಕಾರ್ಡುಗಳಿಗಷ್ಟೇ ವಿತರಿಸಲು ಸಾಧ್ಯವಾಯಿತು. ಶನಿವಾರವೂ ಇದೇ ಸಮಸ್ಯೆ ಮುಂದುವರೆದು ಕೇವಲ 15 ಕಾರ್ಡುಗಳಿಗೆ ಮಾತ್ರ ಪಡಿತರ ವಿತರಿಸಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.