ಬೆಂಗಳೂರು: ‘ಸೇವೆಯೇ ಬಿಜೆಪಿಯ ಜೀವಾಳ. ನಮ್ಮದು (ಬಿಜೆಪಿಯವರದ್ದು) ಸೇವೆ. ಅವರದ್ದು (ಇತರ ಪಕ್ಷ) ಸ್ವಾರ್ಥ. ಇದೇ ವ್ಯತ್ಯಾಸ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ‘ಆರೋಗ್ಯ ಸ್ವಯಂಸೇವಕರ ಅಭಿಯಾನ’ವನ್ನು ಹೊಟೇಲ್ ರಾಡಿಸನ್‌ನಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಜನರ ಆರೋಗ್ಯ ಕಾಪಾಡಲು ಮತ್ತು ರಾಜ್ಯದ ಅಭಿವೃದ್ಧಿಗೆ ಸರ್ಕಾರ ಸದಾ ಸಿದ್ಧವಿದೆ’ ಎಂದರು.
‘ನಾನು 30 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಬೇರೆ ಪಕ್ಷಗಳಲ್ಲಿ ಇರುವವರು ಮಾತನಾಡುವುದು ಸ್ವಾರ್ಥದಿಂದ. ಆದರೆ, ಬಿಜೆಪಿಯ ಸಾಮಾನ್ಯ ಕಾರ್ಯಕರ್ತರ ಸೇವಾ ಮನೋಭಾವ, ದುಡಿತ ಪಕ್ಷಕ್ಕೆ ದೊಡ್ಡ ಆಸ್ತಿ’ ಎಂದು ಬಣ್ಣಿಸಿದರು.
‘1980ರಿಂದ ಇಲ್ಲಿಯವರೆಗೆ ಪ್ರತಿ ಹಂತದಲ್ಲಿ ಮೌಲ್ಯ ತುಂಬುತ್ತ ಬೆಳೆದ, ನೈತಿಕವಾದ ಕಾರ್ಯಕರ್ತ ಪಡೆ ಬಿಜೆಪಿಯಲ್ಲಿ ರಚನೆಯಾಗಿದೆ. ಹೀಗಾಗಿ, ಯಾವುದೇ ಕಾರ್ಯಕ್ರಮ ನೀಡಿದರೂ, ಅಭಿಯಾನ ಆರಂಭಿಸಿದರೂ ಅದು ಯಶಸ್ಸು ಕಾಣುತ್ತದೆ. ಇಂಥ ಕಾರ್ಯಕ್ರಮ ಮಾಡಲು ಕಾಂಗ್ರೆಸ್‌ನಿಂದ ಸಾಧ್ಯ ಇಲ್ಲ’ ಎಂದರು.
‘ರಾಮನಿಗೆ ವಾನರ ಸೇನೆಯಂತೆ, ಕೋವಿಡ್ ಎಂಬ ಮಹಾಮಾರಿಯನ್ನು ಎದುರಿಸಲು ಬಿಜೆಪಿ ಸೈನ್ಯ ಸಿದ್ಧವಾಗಿದೆ. ಈ ಅಭಿಯಾನದಲ್ಲಿ ಪಕ್ಷದ ಕಾರ್ಯಕರ್ತರು ಜನಸೇವಕರಾಗಿ ಜೋಡಿಸಿಕೊಳ್ಳಬೇಕು. ಮಕ್ಕಳ ಆರೋಗ್ಯದ ಜೊತೆಗೆ ತಾಯಂದಿರ ಆರೋಗ್ಯವನ್ನೂ ಕಾಪಾಡಬೇಕು’ ಎಂದು ಅವರು ಸಲಹೆ ನೀಡಿದರು.
ಬಿಜೆಪಿಯ ಹಿರಿಯ ನಾಯಕರಾಗಿದ್ದ ದಿವಂಗತ ಅನಂತಕುಮಾರ್ ಅವರು ಲಕ್ಷಗಟ್ಟಲೆ ಜನರಿಗೆ ಅನ್ನ ಕೊಡುವ, ಬೆಂಗಳೂರು ಪರಿಸರ ಕಾಪಾಡಲು ಆರಂಭಿಸಿದ ಹಸಿರು ಭಾನುವಾರ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ನೆನೆಪಿಸಿಕೊಂಡರು.
‘ಈ ಆರೋಗ್ಯ ಅಭಿಯಾನ ಪ್ರತಿ ಬೂತ್‌ಗೆ ತಲುಪಬೇಕು. ಕಿಟ್‌ಗಳು ಸದುಪಯೋಗ ಆಗಬೇಕು. ಜನರ ಆರೋಗ್ಯ ಕಾಪಾಡುವುದು ನಮ್ಮ ಹೊಣೆಗಾರಿಕೆ. ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ 24 ಸಾವಿರ ಹಾಸಿಗೆ, 6 ಸಾವಿರ ಐಸಿಯು ಹಾಸಿಗೆ ಸಿದ್ಧ ಮಾಡಿದೆ. ನಮ್ಮ ಸರ್ಕಾರ ಇಲ್ಲದೇ ಇರುತ್ತಿದ್ದರೆ ಇವತ್ತು ಏನು ಆಗುತ್ತಿತ್ತೊ ಎಂದು ಚಿಂತನೆ ಮಾಡಬೇಕಿದೆ. ಈಗ ಎಂಥ ಸವಾಲಿಗೂ ಸಿದ್ಧರಾಗಿದ್ದೇವೆ’ ಎಂದರು.
‘ಕೋವಿಡ್ ನಿಯಂತ್ರಿಸಲು ಕಠಿಣ ಕ್ರಮ ತೆಗೆದುಕೊಂಡಿದ್ದೇವೆ. ಗಡಿ ಭಾಗದಲ್ಲಿ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಿದ್ದೇವೆ. ಮತ್ತೆ ಲಾಕ್‌ಡೌನ್ ಮಾಡುವಂಥ ಸಂದರ್ಭ ಬರಬಾರದು ಎಂಬ ಕಾರಣಕ್ಕೆ ಮುನ್ನೆಚ್ಚರಿಕೆಯಾಗಿ ಕೆಲವು ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ’ ಎಂದು ಸಮರ್ಥಿಸಿದರು.
ದೇಶದಲ್ಲಿ ನವ ಪೀಳಿಗೆ ಸೃಷ್ಟಿ: ‘ಯಾವುದೇ ಸಂದರ್ಭ ಬರಲಿ, ಯಾವುದೇ ಪರಿಸ್ಥಿತಿ ಬರಲಿ ಅದನ್ನು ಎದುರಿಸುವ ಶಕ್ತಿ, ಛಾತಿ ನಮ್ಮೆಲ್ಲರ ನಾಯಕ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ. ಅವರು ಪ್ರಧಾನಿಯಾದ ಬಳಿಕ, ಅವರ ಪ್ರೇರಣೆಯಿಂದ ದೇಶದ ಬಗ್ಗೆ ಚಿಂತನೆ ಮಾಡುವಂಥ, ದೇಶ ಕಟ್ಟುವಂಥ ನವ ಪೀಳಿಗೆ ಸೃಷ್ಟಿಯಾಗಿದೆ’ ಎಂದು ಮುಖ್ಯಮಂತ್ರಿ ಹೇಳಿದರು.
‘ಉಡಾಫೆ ಮಾಡುವಂಥ ಪಾಕಿಸ್ತಾನದ ಬಗ್ಗೆ, ದೊಡ್ಡ ದೈತ್ಯ ಎಂದು ತೋರಿಸುವ ಚೀನಾ ಬಗ್ಗೆ ಈ ಹಿಂದಿನ ಪ್ರಧಾನಿಗಳು ತೆಗೆದುಕೊಳ್ಳದಂಥ ನಿಲುವು ಮೋದಿ ತೆಗೆದುಕೊಂಡಿದ್ದಾರೆ. ಗಡಿ ರಕ್ಷಣೆಯ ಜೊತೆಗೆ, ದೇಶದ ಆಂತರಿಕ ಸಮಸ್ಯೆಗಳನ್ನು ನೇರವಾಗಿ ಎದುರಿಸಿ, ಬಗೆಹರಿಸುವ ಕೆಲಸವನ್ನೂ ಮಾಡಿದ್ದಾರೆ. ಕೋವಿಡ್‌ನ ಈ ಸಂದರ್ಭದಲ್ಲಿ ಮೋದಿ ಕಠಿಣ, ದಿಟ್ಟ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಅವರ ನಿರ್ಣಯದ ಹಿಂದೆ ತತ್ವ, ನೀತಿ, ಗುರಿ, ಪರಿಣಾಮಗಳಿರುತ್ತದೆ. ಸುಮ್ಮನೆ ಹೆಸರು, ಪ್ರಚಾರಕ್ಕೆ ಅವರು ನಿರ್ಣಯ ತೆಗೆದುಕೊಳ್ಳುವುದಿಲ್ಲ’ ಎಂದೂ ಮುಖ್ಯಮಂತ್ರಿ ಶ್ಲಾಘಿಸಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣಕುಮಾರ್, ಬಿಜೆಪಿ ಉಪಾಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.