ಬೆಂಗಳೂರು: ಕಲಾವಿದ ರಾಜಾ ರವಿವರ್ಮ ಅವರ 176ನೇ ಜನ್ಮದಿನಾಚರಣೆ ಪ್ರಯುಕ್ತ ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್, ತಿರುವಾಂಕೂರಿನ ಮಹಾರಾಣಿಯಾಗಿದ್ದ ಸೇತು ಲಕ್ಷ್ಮಿ ಬಾಯಿಯ ಜೀವನ ಕಥೆ ವಿವರಿಸುವ ಚಿತ್ರಕಲಾ ಪ್ರದರ್ಶನವನ್ನು‘ಡಾಟರ್ ಆಫ್ ಪ್ರಾವಿಡೆನ್ಸ್’ ಶೀರ್ಷಿಕೆಯಡಿ ಇದೇ 30ರವರೆಗೆ ಹಮ್ಮಿಕೊಂಡಿದೆ.
ಈ ಪ್ರದರ್ಶನವು ಏ.29ರಿಂದಲೇ ಪ್ರಾರಂಭವಾಗಿದ್ದು, ಲ್ಯಾವೆಲ್ಲೆ ರಸ್ತೆಯ 7ನೇ ಅಡ್ಡರಸ್ತೆಯಲ್ಲಿರುವ ಮೈನಿ ಸದನದಲ್ಲಿರುವ ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್‌ನಲ್ಲಿ ನಡೆಯುತ್ತಿದೆ. ಸೇತು ಲಕ್ಷ್ಮಿ ಬಾಯಿ ತಿರುವಾಂಕೂರಿನ ರಾಜಮನೆತನದ ಕೊನೆಯ ಮಹಾರಾಣಿ ಹಾಗೂ ರಾಜಾ ರವಿವರ್ಮ ಅವರ ಹಿರಿಯ ಮೊಮ್ಮಗಳು. ಪ್ರದರ್ಶನದಲ್ಲಿ ಸೇತು ಲಕ್ಷ್ಮಿ ಬಾಯಿಗೆ ಸಂಬಂಧಿಸಿದ ಅಪರೂಪದ ಹಲವು ಕಲಾಕೃತಿಗಳಿವೆ.
‘ಪ್ರದರ್ಶನವು ಮಹಾರಾಣಿ ಮತ್ತು ಅವರ ಜೀವನದ ಬಗೆಗಿನ ಅಪರೂಪದ ಕಲಾಕೃತಿಗಳ ಸಂಗ್ರಹವನ್ನು ಒಳಗೊಂಡಿದೆ. ಇದನ್ನು ವಿವಿಧ ಅಧ್ಯಾಯಗಳಲ್ಲಿ ದೃಶ್ಯಾತ್ಮಕವಾಗಿ ನಿರೂಪಿಸಲಾಗಿದೆ. ಮಹಾರಾಣಿಯ ಮೊದಲ ಮೊಮ್ಮಗಳು ಹಾಗೂ ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್‌ನ ಅಧ್ಯಕ್ಷೆಯೂ ಆಗಿರುವ ಭರಣಿ ತಿರುನಾಳ್ ರುಕ್ಮಿಣಿ ಬಾಯಿ ತಂಪುರನ್ ಅವರು ರಚಿಸಿದ ತೈಲ ವರ್ಣಚಿತ್ರವನ್ನೂ ಇಲ್ಲಿ ಪ್ರದರ್ಶಿಸಲಾಗುತ್ತಿದೆ’ ಎಂದು ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ಗೀತಾಂಜಲಿ ಮೈನಿ ತಿಳಿಸಿದ್ದಾರೆ.
‘ತಿರುವಾಂಕೂರು ಮತ್ತು ಭಾರತದ ಇತಿಹಾಸದಲ್ಲಿ ಸೇತು ಲಕ್ಷ್ಮಿ ಬಾಯಿ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಕೊನೆಯ ದಿನಗಳನ್ನು ಇಲ್ಲಿಯೇ ಕಳೆದಿದ್ದರು. ಅವರ ಬಾಲ್ಯದಿಂದ ಕೊನೆಯ ದಿನಗಳವರೆಗಿನ ವರ್ಣಚಿತ್ರವನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ. ಈ ವರ್ಣಚಿತ್ರಗಳ ಮೂಲಕ ರಾಜಾ ರವಿವರ್ಮ ಅವರನ್ನು ಸ್ಮರಿಸಿಕೊಂಡು, ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.