ADVERTISEMENT

ಉದ್ಯಮಿ ಅಪಹರಿಸಿ ಚಿನ್ನಾಭರಣ ಸುಲಿಗೆ; ಗೆಳತಿ ಸೇರಿ ಏಳು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 23:30 IST
Last Updated 24 ನವೆಂಬರ್ 2024, 23:30 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಆಂಧ್ರ ಪ್ರದೇಶದ ಉದ್ಯಮಿಯನ್ನು ಆತನ ಸ್ನೇಹಿತೆ ಮೂಲಕ ಕರೆಸಿಕೊಂಡು ಅಪಹರಿಸಿ, ಚಿನ್ನಾಭರಣ ದೋಚಿದ್ದ ಏಳು ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲಿಸರು ಬಂಧಿಸಿದ್ದಾರೆ .

ADVERTISEMENT

ಆಂಧ್ರಪ್ರದೇಶದ ನೆಲ್ಲೂರಿನ ಪೋತುಲ ಶಿವ ಎಂಬುವರನ್ನು ಅಪಹರಿಸಿ ಸುಲಿಗೆ ಮಾಡಿದ ಆರೋಪದಡಿ ಮೋನಿಕಾ, ಹರೀಶ್, ಹರಿಕೃಷ್ಣ, ರಾಜ್‍ಕುಮಾರ್, ನರೇಶ್, ಅಂಜನೀಲ್, ನರಸಿಂಹ ಎಂಬುವವರನ್ನು ಬಂಧಿಸಲಾಗಿದೆ.

‘ಆಂಧ್ರ ಪ್ರದೇಶದಲ್ಲಿ ಔಷಧ ವ್ಯಾಪಾರಿಯಾಗಿರುವ ಶಿವ ಹಾಗೂ ಮೋನಿಕಾ ಅವರು ನಾಲ್ಕು ವರ್ಷಗಳಿಂದ ಸ್ನೇಹಿತರು. ನವೆಂಬರ್ 17ರಂದು ಮೋನಿಕಾ, ಶಿವನನ್ನು ಪೆನುಗೊಂಡಕ್ಕೆ ಕರೆಸಿದ್ದಳು. ನಂತರ ಇಬ್ಬರೂ ಪಾವಗಡಕ್ಕೆ ಬಂದು ಸುತ್ತಾಟ ನಡೆಸುವ ವೇಳೆ ಕಾರೊಂದರಲ್ಲಿ ಬಂದ ಆರೋಪಿಗಳಾದ ಹರೀಶ್, ಹರಿಕೃಷ್ಣ ಹಾಗೂ ಇತರರು ತಾವು ಪೊಲೀಸರೆಂದು ಪರಿಚಯಿಸಿಕೊಂಡು ಶಿವ ಹಾಗೂ ಮೋನಿಕಾಳನ್ನು ಕಾರಿನಲ್ಲಿ ಅಪಹರಿಸಿದರು. ಶಿವ ಅವರ ಮೇಲೆ ಹಲ್ಲೆ ನಡೆಸಿ ಪಾವಗಡದ ಮನೆಯೊಂದರಲ್ಲಿ ಕೂಡಿ ಹಾಕಿದ್ದರು’ ಎಂದು  ಪೊಲೀಸರು ತಿಳಿಸಿದ್ದಾರೆ. 

‘ಮೂರು ದಿನಗಳು ಹೋಟೆಲ್‌ನಲ್ಲಿರಿಸಿಕೊಂಡು ಅವರ ಬಳಿಯಿದ್ದ ಚಿನ್ನದ ಸರ, ಬ್ರಾಸ್‌ಲೆಟ್ ಕಿತ್ತುಕೊಂಡು ಅದನ್ನು ಅಡವಿಟ್ಟು ಹಣ ಪಡೆದುಕೊಂಡಿದ್ದರು. ನಂತರ ಮೋನಿಕಾಳನ್ನು ಬಿಟ್ಟು ಕಳುಹಿಸಿದರು. ಬಳಿಕ ಶಿವನಿಗೆ ₹10 ಲಕ್ಷ ನೀಡುವಂತೆ ಬೇಡಿಕೆ ಇರಿಸಿದರು. ಆದರೆ ಅವರು  ₹5 ಲಕ್ಷ  ನೀಡಲು ಒಪ್ಪಿದರು. ಸ್ನೇಹಿತರ ಮೂಲಕ ಹಣವನ್ನು ಶಿವ ಅವರು ತನ್ನ ಖಾತೆಗೆ ಹಾಕಿಸಿಕೊಂಡಿದ್ದರು. ಆದರೆ, ಹಣ ನಗದೀಕರಣಕ್ಕೆ ಅಗತ್ಯವಿರುವ ಡೆಬಿಟ್ ಕಾರ್ಡ್‌ಗಳನ್ನ ಮನೆಯಲ್ಲಿಟ್ಟು ಬಂದಿದ್ದರು. ಮನೆಯವರಿಗೆ ಕರೆ ಮಾಡಿಸಿದ್ದ ಆರೋಪಿಗಳು, ಮೆಜೆಸ್ಟಿಕ್‌ಗೆ ಅವರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ತರಿಸಿಕೊಂಡಿದ್ದರು’ ಎಂದು ಹೇಳಿದ್ದಾರೆ.

‘ನವೆಂಬರ್ 21ರಂದು ಹಣ ಡ್ರಾ ಮಾಡಿಸಲು ಮೂವರೂ ಆರೋಪಿಗಳು ಶಿವನನ್ನು ಕೋರಮಂಗಲದ ಫೋರಂ ಮಾಲ್ ಜಂಕ್ಷನ್ ಬಳಿಯಿರುವ ಎಟಿಎಂ ಬಳಿ ಕರೆತಂದಿದ್ದರು. ಆಗ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಇಬ್ಬರು ಆರೋಪಿಗಳ ನಡುವೆ ಜಗಳವಾಯಿತು. ಗಸ್ತಿನಲ್ಲಿದ್ದ ಕೋರಮಂಗಲ ಪೊಲೀಸರ ತಂಡ ಅನುಮಾನಗೊಂಡು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಅಪಹರಣ ಮಾಡಿರುವುದು ಗೊತ್ತಾಯಿತು. ತಕ್ಷಣ ಪ್ರಕರಣ ದಾಖಲಿಸಿಕೊಂಡ ಕೋರಮಂಗಲ ಪೊಲೀಸರು, ಪಾವಗಡಲ್ಲಿದ್ದ ನಾಲ್ವರ ಸಹಿತ ಒಟ್ಟು ಏಳು ಆರೋಪಿಗಳನ್ನು ಬಂಧಿಸಿದರು’ ಎಂದು ತಿಳಿಸಿದ್ದಾರೆ.

ಆರೋಪಿ ಯುವತಿ ಹಾಗೂ ಆಕೆಯ ಪ್ರಿಯಕರ ಅಂಜನೀಲ್ ಸೇರಿ ಶಿವನ ಅಪಹರಣದ ಸಂಚು ರೂಪಿಸಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಆರೋಪಿಗಳ ಪೈಕಿ ಒಬ್ಬನ ವಿರುದ್ಧ 15 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.