ADVERTISEMENT

ಬೆಂಗಳೂರು | ಇಬ್ಬರು ಉಗ್ರರಿಗೆ ಏಳು ವರ್ಷ ಜೈಲು, ದಂಡ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2023, 18:29 IST
Last Updated 27 ಡಿಸೆಂಬರ್ 2023, 18:29 IST
   

ಬೆಂಗಳೂರು: ಬಂಧಿತ ಇಬ್ಬರು ಉಗ್ರರಿಗೆ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಬುಧವಾರ ಆದೇಶಿಸಿದೆ.

ಅಸ್ಸಾಂನ ಅಖ್ತರ್ ಹುಸೇನ್ ಲಷ್ಕರ್ (24) ಮತ್ತು ಪಶ್ಚಿಮ ಬಂಗಾಳದ ಅಬ್ದುಲ್ ಅಲೀಮ್  ಅಲಿಯಾಸ್ ಎಂಡಿ ಜುಬಾನ್(23) ಶಿಕ್ಷೆಗೊಳಗಾದ ಉಗ್ರರು. ಲಷ್ಕರ್‌ಗೆ ₹41 ಸಾವಿರ, ಅಬ್ದುಲ್ ಅಲೀಮ್ ಮೊಂಡಲ್‌ಗೆ ₹ 51 ಸಾವಿರ ದಂಡ ವಿಧಿಸಲಾಗಿದೆ.

ನಿಷೇಧಿತ ಅಲ್‌ಖೈದಾ ಉಗ್ರ ಸಂಘಟನೆ ಜತೆಗೆ ಸಂಪರ್ಕದಲ್ಲಿದ್ದ ಆರೋಪದ ಅಡಿ ಇವರನ್ನು ಕಳೆದ ವರ್ಷ ಸಿಸಿಬಿ ಪೊಲೀಸರು ಬಂಧಿಸಿದ್ದರು.

ADVERTISEMENT

ಬಂಧಿತರು ವಿದೇಶದಲ್ಲಿರುವ ಅಲ್‌ಖೈದಾ ಸಂಘಟನೆ ಸದಸ್ಯರ ಜತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕದಲ್ಲಿದ್ದರು. ಟೆಲಿಗ್ರಾಂ ಆ್ಯಪ್‌ನಲ್ಲಿ ವಿದೇಶಿ ಹ್ಯಾಂಡ್ಲರ್‌ಗಳ ಜತೆ ಸಂವಹನ ನಡೆಸುತ್ತಿದ್ದರು. ಹಲವು ರಾಜ್ಯಗಳ ಯುವಕರನ್ನು ಸಂಪರ್ಕಿಸಿ, ಉಗ್ರ ಸಂಘಟನೆಗೆ ನೇಮಕ ಮಾಡಲು ಇಬ್ಬರು ಯತ್ನಿಸಿದ್ದರು ಎಂಬುದು ಎನ್‌ಐಎ ತನಿಖೆ ವೇಳೆ ಗೊತ್ತಾಗಿತ್ತು.

ಜಮ್ಮು–ಕಾಶ್ಮೀರದ ಮೂಲಕ ಅಫ್ಗಾನಿಸ್ತಾನದ ಖಾರಾಸನ್‌ ಪ್ರಾಂತ್ಯಕ್ಕೆ ತೆರಳಲು ಇಬ್ಬರು ಉಗ್ರರು ಸಿದ್ಧತೆ ನಡೆಸಿದ್ದರು. ಅಲ್ಲಿ ಉಗ್ರ ತರಬೇತಿ ಪಡೆದು ವಾಪಸ್‌ ಬಂದು ಹಲವೆಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎಂದು ಮೂಲಗಳು ಹೇಳಿವೆ.

‘ಅಖ್ತರ್ ಹುಸೇನ್ ಲಷ್ಕರ್‌ನದ್ದು ಅಸ್ಸಾಂನ ಕಚಾರ್ ಜಿಲ್ಲೆಯ ತೆಲಿತಿಕಾರ್ ಗ್ರಾಮ. ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ತಿಲಕನಗರದ ಬಿ.ಟಿ.ಬಿ ಲೇಔಟ್‌ನ 3ನೇ ಕ್ರಾಸ್‌ನ ಫನಿ ಮಸೀದಿ ಸಮೀಪದ ಬಾಡಿಗೆ ಮನೆಯಲ್ಲಿ ಮೂವರು ಸ್ನೇಹಿತರ ಜತೆ ವಾಸವಾಗಿದ್ದ. ಹಗಲು ವೇಳೆ ಹೊರಗೆ ಬರುತ್ತಿರಲಿಲ್ಲ. ಸಂಜೆ ವೇಳೆ ಫುಡ್‌ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ’ ಎಂದು ಮೂಲಗಳು ಹೇಳಿವೆ.

ಖಚಿತ ಮಾಹಿತಿ ಮೇರೆಗೆ ಕಳೆದ ವರ್ಷದ ಜುಲೈನಲ್ಲಿ ಸಿಸಿಬಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅಖ್ತರ್‌ನನ್ನು ಬಂಧಿಸಿದ್ದರು. ಅಖ್ತರ್‌ ನೀಡಿದ ಮಾಹಿತಿ ಮೇರೆಗೆ ತಮಿಳುನಾಡಿನಲ್ಲಿ ಜುಬಾನ್‌ನನ್ನು ಬಂಧಿಸಲಾಗಿತ್ತು. ಈ ಸಂಬಂಧ ತಿಲಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.