ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜೀವರಕ್ಷಕ ಔಷಧಿಗಳ ತೀವ್ರ ಕೊರತೆ ಇರುವುದು ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ಸೋಮವಾರ ನಡೆಸಿದ ದಿಢೀರ್ ತಪಾಸಣೆಯಲ್ಲಿ ಪತ್ತೆಯಾಗಿದೆ. ಔಷಧಿಗಳ ಕೊರತೆಗೆ ಅನುದಾನದ ಕೊರತೆಯೂ ಬಹಿರಂಗವಾಗಿದೆ.
ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿನ ದುರಾಡಳಿತ, ಸಮಸ್ಯೆಗಳ ಕುರಿತು ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತರು, ವಿಚಾರಣೆ ನಡೆಸುತ್ತಿದ್ದಾರೆ. ಲೋಕಾಯುಕ್ತ, ನ್ಯಾಯಮೂರ್ತಿ ಬಿ.ಎಸ್. ಪಾಟೀಲ, ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಮತ್ತು ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸೋಮವಾರ ಮಧ್ಯಾಹ್ನ ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅತ್ಯಂತ ಅಗತ್ಯವಿರುವ ಜೀವರಕ್ಷಕ ಔಷಧಿಗಳ ದಾಸ್ತಾನು ಇಲ್ಲ. ಜೀವರಕ್ಷಕ ಔಷಧಿಗಳ ದಾಸ್ತಾನಿನಲ್ಲಿ ತೀವ್ರ ಕೊರತೆ ಕಂಡುಬಂದಿದೆ. ಈ ಕುರಿತು ಸಂಸ್ಥೆಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಅನುದಾನದ ಕೊರತೆ ಕಾರಣ ಎಂಬ ಉತ್ತರ ನೀಡಿದರು. ಔಷಧಿ ಖರೀದಿಗೆ ವಾರ್ಷಿಕ ₹ 70 ಕೋಟಿ ಅನುದಾನ ನೀಡಲಾಗುತ್ತಿತ್ತು. ಈ ವರ್ಷ ಶೇಕಡ 40ರಷ್ಟು ಕಡಿತ ಮಾಡಲಾಗಿದೆ. ಇದರಿಂದಾಗಿ ಔಷಧಿ ಖರೀದಿಗೆ ಸಮಸ್ಯೆಯಾಗಿದೆ ಎಂಬ ಮಾಹಿತಿ ನೀಡಿದರು’ ಎಂದು ಬಿ.ಎಸ್. ಪಾಟೀಲ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪೂರೈಕೆದಾರರಿಗೆ ಬಿಲ್ ಬಾಕಿ:
ಆಸ್ಪತ್ರೆಗೆ ಔಷಧಿ ಪೂರೈಕೆ ಮಾಡುತ್ತಿರುವ ಗುತ್ತಿಗೆದಾರರಿಗೆ ದೊಡ್ಡ ಮೊತ್ತದ ಬಿಲ್ ಪಾವತಿ ಬಾಕಿ ಇದೆ. ಈ ಕಾರಣದಿಂದ ಗುತ್ತಿಗೆದಾರರು ದುಬಾರಿ ಬೆಲೆಯ ಔಷಧಿಗಳನ್ನು ಪೂರೈಸುತ್ತಿಲ್ಲ. ಇದು ಕೂಡ ಜೀವರಕ್ಷಕ ಔಷಧಿಗಳ ಕೊರತೆಗೆ ಕಾರಣ ಎಂಬ ಮಾಹಿತಿಯನ್ನು ಆಸ್ಪತ್ರೆಯ ಅಧಿಕಾರಿಗಳು ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರ ಬಳಿ ಹಂಚಿಕೊಂಡಿದ್ದಾರೆ.
‘ಆಸ್ಪತ್ರೆಯಲ್ಲಿ ರೋಗಿಗಳಿಗೆ ಔಷಧಿ ವಿತರಣೆಯಲ್ಲೂ ಕೆಲವು ಸಮಸ್ಯೆಗಳಿರುವುದು ಕಂಡುಬಂದಿದೆ. ಫಾರ್ಮಸಿ ವಿಭಾಗದಲ್ಲಿ ಮೂವರು ಗುತ್ತಿಗೆ ನೌಕರರಿದ್ದಾರೆ. ಅವರ ಬಳಿ ಔಷಧಿ ವಿತರಣೆಗೆ ಸಂಬಂಧಿಸಿದ ಮಾಹಿತಿ ಸಮರ್ಪಕವಾಗಿರಲಿಲ್ಲ’ ಎಂದು ಲೋಕಾಯುಕ್ತರು ತಿಳಿಸಿದರು.
ವೈದ್ಯರ ಗೈರು:
ಆಸ್ಪತ್ರೆಯಲ್ಲಿ ಭಾರಿ ಸಂಖ್ಯೆಯ ರೋಗಿಗಳು ಚಿಕಿತ್ಸೆಗಾಗಿ ಕಾಯುತ್ತಿದ್ದರು. ಆದರೆ, ಮಧ್ಯಾಹ್ನ 3 ಗಂಟೆಯಾದರೂ ವೈದ್ಯರು ಲಭ್ಯವಿರಲಿಲ್ಲ. ವೈದ್ಯರ ಗೈರು ಕುರಿತು ಲೋಕಾಯುಕ್ತರು ಪ್ರಶ್ನಿಸಿದಾಗ, ‘ಊಟಕ್ಕೆ ತೆರಳಿದ್ದಾರೆ’ ಎಂದು ಸಿಬ್ಬಂದಿ ಮಾಹಿತಿ ನೀಡಿದರು.
‘ಆಸ್ಪತ್ರೆಯಲ್ಲಿ ಜೀವರಕ್ಷಕ ಔಷಧಿಗಳ ಕೊರತೆ, ಸಮರ್ಪವಾಗಿ ಚಿಕಿತ್ಸೆ ನೀಡದಿರುವುದು, ವೈದ್ಯರ ಗೈರು ಸೇರಿದಂತೆ ಪರಿಶೀಲನೆ ವೇಳೆ ಕಂಡುಬಂದ ಸಮಸ್ಯೆಗಳು ಹಾಗೂ ಲೋಪಗಳ ಕುರಿತು ವರದಿಯೊಂದನ್ನು ಸಿದ್ಧಪಡಿಸಲಾಗುವುದು. ಆ ಬಳಿಕ ಸಂಬಂಧಿಸಿದ ಅಧಿಕಾರಿಗಳು ಮತ್ತು ವೈದ್ಯರಿಗೆ ನೋಟಿಸ್ ಜಾರಿಗೊಳಿಸಲಾಗುವುದು. ಆಸ್ಪತ್ರೆಯಲ್ಲಿ ಜನಸ್ನೇಹಿ ವಾತಾವರಣ ನಿರ್ಮಾಣ ಆಗುವವರೆಗೂ ವಿಚಾರಣೆ ಮುಂದುವರಿಯಲಿದೆ’ ಎಂದು ಬಿ.ಎಸ್. ಪಾಟೀಲ ತಿಳಿಸಿದರು.
ಬಿದ್ದು ಒದ್ದಾಡಿದ್ದ ರೋಗಿ
ಸೋಮವಾರ ಬೆಳಿಗ್ಗೆ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದ ಲೋಕಾಯುಕ್ತದ ಗುಪ್ತಚರ ವಿಭಾಗದ ಪೊಲೀಸರು ಗೋಪ್ಯವಾಗಿ ಪರಿಶೀಲನೆ ನಡೆಸಿದ್ದರು. ರೋಗಿಯೊಬ್ಬರು ಬಿದ್ದು ಒದ್ದಾಡುತ್ತಿದ್ದರೂ ವೈದ್ಯರು ಸಿಬ್ಬಂದಿಗೆ ನೆರವಿಗೆ ಬಂದಿರಲಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೊ ಫೋಟೊ ಸೆರೆಹಿಡಿದಿದ್ದರು. ಈ ಘಟನೆಯನ್ನು ಪ್ರಸ್ತಾಪಿಸಿದ ಲೋಕಾಯುಕ್ತರು ವೈದ್ಯರು ಮತ್ತು ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ರೋಗಿಗಳಿಗೆ ತುರ್ತು ನೆರವು ನೀಡಲು ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.