ಬೆಂಗಳೂರು: ಪ್ರತಿದಿನ ಸಂಜೆಯಾಗುತ್ತಿದ್ದಂತೆ ಅವೆನ್ಯೂ ರಸ್ತೆಯ ಈ ಭಾಗ ಕೊಳಚೆಮಯವಾಗುತ್ತಿದೆ. ಸುತ್ತಮುತ್ತಲಿನ ವ್ಯಾಪಾರಿಗಳು ದುರ್ವಾಸನೆಯಲ್ಲೇ ವ್ಯಾಪಾರ ಮಾಡುವಂತಾಗಿದೆ. ವಾಹನ ಸವಾರರು ಮೂಗುಮುಚ್ಚಿಕೊಂಡು ಸಾಗುತ್ತಿದ್ದಾರೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿ ನಡೆದಿದ್ದರೂ, ಸಮಸ್ಯೆ ಪರಿಹಾರವಾಗಿಲ್ಲ, ನಿತ್ಯದ ಗೋಳು ತಪ್ಪಿಲ್ಲ.
ಸ್ಮಾರ್ಟ್‌ಸಿಟಿ ಕಾಮಗಾರಿಗಳು ನಡೆದ ಬಳಿಕ ರಸ್ತೆಯ ಉಳಿದ ಭಾಗದಲ್ಲಿದ್ದ ಸಮಸ್ಯೆಗಳು ಸರಿ ಹೋಗಿವೆ. ಆದರೆ, ಮೈಸೂರು ಬ್ಯಾಂಕ್ ಸರ್ಕಲ್ ಕಡೆಯಿಂದ ಅವೆನ್ಯೂ ರಸ್ತೆಗೆ ಪ್ರವೇಶಿಸುವಲ್ಲಿರುವ ಮ್ಯಾನ್‌ಹೋಲ್‌ನಲ್ಲಿ ಕೊಳಚೆ ನೀರು ಉಕ್ಕುವುದು ತಪ್ಪಿಲ್ಲ. ಸುತ್ತಲಿನ ಪ್ರದೇಶ ಎತ್ತರವಿದ್ದು, ಮ್ಯಾನ್‌ಹೋಲ್ ಇರುವ ಭಾಗ ತಗ್ಗಿನಲ್ಲಿರುವುದರಿಂದ ಕೊಳಚೆನೀರು ಆಗಾಗ್ಗೆ ರಸ್ತೆಗೆ ಹರಿಯಲು ಕಾರಣವಾಗುತ್ತಿದೆ. ವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದು ಸ್ಥಳೀಯರಾದ ಸುರೇಶ್ ದೂರಿದರು.
‘ಮೊದಲು ವಾರಕ್ಕೊಮ್ಮೆ ಮ್ಯಾನ್‌ಹೋಲ್‌ನಿಂದ ಕೊಳಚೆನೀರು ಉಕ್ಕಿ ಹರಿಯುತ್ತಿತ್ತು. ಕಳೆದ ಒಂದು ವಾರದಿಂದ ಪ್ರತಿದಿನ ಹರಿಯುತ್ತಿದೆ. ಬಿಬಿಎಂಪಿ ಅಧಿಕಾರಿಗಳಿಗೆ, ಒಳಚರಂಡಿ ಮಂಡಳಿ ಎಂಜಿನಿಯರ್‌ಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ನಾವು ದೂರು ನೀಡಿದಾಗ ಒಮ್ಮೆ ಬಂದು ಫೋಟೊ ತೆಗೆದುಕೊಂಡು ಹೋಗುತ್ತಾರೆ. ಒತ್ತಡ ಹಾಕಿದರೆ ಒಳಚರಂಡಿಯನ್ನು ಸ್ವಲ್ಪ ಸ್ವಚ್ಛ ಮಾಡಿಸುತ್ತಾರೆ. ಅವರು ಅತ್ತ ಹೋದ ಮೇಲೆ ಮತ್ತೆ ಸಮಸ್ಯೆ ಹಾಗೇ ಮುಂದುವರಿಯುತ್ತದೆ’ ಎಂದು ಬೀದಿ ಬದಿ ವ್ಯಾಪಾರಿ ರಿಯಾಜ್ ಅಹ್ಮದ್ ದೂರಿದರು.
‘ಕೊಳಚೆ ನೀರಿನ ದುರ್ನಾತದಿಂದಾಗಿ ಗ್ರಾಹಕರು ಸಂಚರಿಸಲು ಅಸಹ್ಯ ಪಡುತ್ತಿದ್ದಾರೆ. ವ್ಯಾಪಾರಿಗಳು ದುರ್ವಾಸನೆ ಸಹಿಸಿಕೊಂಡು ವ್ಯಾಪಾರ ಮಾಡುತ್ತಿದ್ದರೂ, ಜನರೇ ಬರುತ್ತಿಲ್ಲ. ಈ ಸಮಸ್ಯೆಯನ್ನು ಕೂಡಲೇ ಸರಿಪಡಿಸಬೇಕು’ ಎಂದು ಬಟ್ಟೆ ವ್ಯಾಪಾರಿ ಸಾಹಿದ್ ಆಗ್ರಹಿಸಿದರು.
ಕೊಳಚೆ ನೀರಿನ ರಭಸಕ್ಕೆ ಮ್ಯಾನ್‌ಹೋಲ್‌ನ ಮುಚ್ಚಳವೇ ಸರಿದು ಹೋಗುತ್ತಿದೆ. ದ್ವಿಚಕ್ರವಾಹನ ಸವಾರರು, ಪಾದಚಾರಿಗಳು ಈ ಗುಂಡಿಗೆ ಬೀಳುವುದನ್ನು ತಪ್ಪಿಸಲು ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ.
ದುರಸ್ತಿ ಮಾಡಿದರೂ ನಿಲ್ಲದ ಕೊಳಚೆ: ಸಾರ್ವಜನಿಕರ ದೂರಿನ ಮೇರೆಗೆ ಬಿಬಿಎಂಪಿ ಒಳಚರಂಡಿ ಮಂಡಳಿಯ ಎಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಕಾರ್ಮಿಕರು ಬುಧವಾರ ಸಂಜೆ ಬಂದು ಒಳಚರಂಡಿಯೊಳಗೆ ಸೇರಿದ್ದ ಮಣ್ಣು ತೆಗೆದು ಹೊರಗೆ ಹಾಕಿದ್ದರು. ಕೊಳಚೆ ಸರಾಗವಾಗಿ ಹರಿದು ಸಮಸ್ಯೆ ಪರಿಹಾರವಾಗಲಿದೆ ಎಂದು ಸ್ಥಳೀಯ ವ್ಯಾಪಾರಿಗಳು ಅಂದುಕೊಂಡಿದ್ದರು. ಗುರುವಾರ ಸಂಜೆ ಮತ್ತೆ ಮ್ಯಾನ್‌ಹೋಲ್‌ನಲ್ಲಿ ಕೊಳಚೆನೀರು ಉಕ್ಕಿ ಹರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.