ಕೆಂಗೇರಿ: ಇಲ್ಲಿನ ಗುಟ್ಟೆ ಆಂಜನೇಯ ಸ್ವಾಮಿ ರಸ್ತೆಯ ನಾಗರಿಕರ ಪಾಲಿಗೆ ಪ್ರತಿ ಮಳೆಗಾಲವೂ ದುಃಸ್ವಪ್ನವಾಗಿ ಕಾಡುತ್ತಿದೆ !
ರಸ್ತೆ ಬದಿಯಲ್ಲಿರುವ ರಾಜಕಾಲುವೆಯು ಮಳೆಗಾಲದಲ್ಲಿ ತೋರುವ ಆರ್ಭಟಕ್ಕೆ ಇಲ್ಲಿನ 20ಕ್ಕೂ ಹೆಚ್ಚು ನಿವಾಸಿಗಳು ನಲುಗಿ ಹೋಗಿದ್ದಾರೆ.
ಗುಟ್ಟೆ ಆಂಜನೇಯ ಸ್ವಾಮಿ ರಸ್ತೆ, ಮಾರಮ್ಮ ದೇವಾಲಯ ಬಳಿಯ 1 ನೇ ಮುಖ್ಯರಸ್ತೆ ಬದಿಯಲ್ಲೇ ರಾಜಕಾಲುವೆ ಇದೆ. ಕೆಂಗೇರಿ ಸುತ್ತಮುತ್ತಲ ಪ್ರದೇಶದ ಕೊಳಚೆ ನೀರು ಇದೇ ಕಾಲುವೆ ಮೂಲಕ ಹರಿಯುತ್ತದೆ. ಮಳೆಗಾಲದಲ್ಲಿ ಕೊಳಚೆ ನೀರಿನೊಂದಿಗೆ ಸೇರುವ ಮಳೆ ನೀರು, ಹರಿವಿನ ಪ್ರಮಾಣವನ್ನು ದುಪ್ಪಟ್ಟು ಮಾಡುತ್ತದೆ. ತಡೆಗೋಡೆ ಮೀರಿ ಹರಿಯುವ ಕೊಳಚೆ ನೀರು, ಪ್ರತಿ ಮಳೆಗಾಲದಲ್ಲಿ ಸಮಸ್ಯೆಯನ್ನು ತಂದೊಡ್ಡುತ್ತಿದೆ.
ಇಷ್ಟೇ ಅಲ್ಲದೇ ಕೆಂಗೇರಿಯ ಕೋಟೆ ಸುತ್ತಮುತ್ತಲಿರುವ ಎತ್ತರ ಪ್ರದೇಶದಿಂದ ಹರಿದು ಬರುವ ಮಳೆ ನೀರು ಕೂಡ 1ನೇ ಮುಖ್ಯರಸ್ತೆಯ ಮುಖಾಂತರವೇ ರಾಜಕಾಲುವೆ ಸೇರಬೇಕು. ಮಳೆ ನೀರು ಹಾಗೂ ರಾಜಕಾಲುವೆ ನೀರು ಒಟ್ಟಿಗೆ ಏಕ ಕಾಲದಲ್ಲಿ ಸಾಗಲು ಸಾಧ್ಯವಾಗದೆ 1ನೇ ಮುಖ್ಯರಸ್ತೆಯತ್ತ ಹಿಂದಕ್ಕೆ ಬರುತ್ತಿದೆ. ರಸ್ತೆ ಆಸುಪಾಸಿನ ಎಲ್ಲಾ ಮನೆಗಳಿಗೂ ಕೊಳಚೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಶಾಂತಮ್ಮ ಅಲವತ್ತು ಕೊಂಡರು.
‘ಮಳೆಗಾಲ ಆರಂಭವಾದರೆ ಆತಂಕ ಹೆಚ್ಚಾಗುತ್ತದೆ. ಸಮಸ್ಯೆಯಿಂದ ಪಾರಾಗಲು ಮನೆ ಬಾಗಿಲ ಬಳಿ ಮೂರು ಅಡಿ ಎತ್ತರದ ತಡೆಗೋಡೆ ನಿರ್ಮಾಣ ಮಾಡಿದ್ದೇವೆ. ಹೀಗಿದ್ದರೂ ಕೊಳಚೆ ನೀರು ನುಗ್ಗಿ ಅವಾಂತರವಾಗುತ್ತಿದೆ. ರಾಜಕಾಲುವೆಯ ಕೊಳಚೆ ನೀರಿನೊಂದಿಗೆ ಹಾವು ಚೇಳುಗಳಂತಹ ವಿಷ ಜಂತುಗಳು ಮನೆ ಅಂಗಳಕ್ಕೆ ಬರುತ್ತಿವೆ‘ ಎಂದು ಗೃಹಿಣಿ ನಾಗಮ್ಮ ಬೇಸರ ವ್ಯಕ್ತಪಡಿಸಿದರು.
ಈ ಸಮಸ್ಯೆ ಪರಿಹರಿಸುವಂತೆ ಹತ್ತು ವರ್ಷಗಳಿಂದ ಪರಿಹಾರಕ್ಕಾಗಿ ಹಲವಾರು ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಶಾಸಕರ ಗಮನಕ್ಕೆ ತರಲಾಗಿದೆ. ಹೀಗಿದ್ದರೂ ಸಮಸ್ಯೆಗೆ ಪರಿಹಾರ ದೊರಕಿಲ್ಲ ಎಂದು ನಿವಾಸಿ ವೇಣು ಮಾಧವಭಟ್ ಅಳಲು ತೋಡಿಕೊಂಡರು. ವೈಜ್ಞಾನಿಕ ಕಾಮಗಾರಿ ನಡೆಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.