ADVERTISEMENT

ಕಬ್ಬನ್‌ಪೇಟೆ: ಸಂಪ್‌ಗೆ ಒಳಚರಂಡಿ ನೀರು

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 19:23 IST
Last Updated 9 ಜುಲೈ 2024, 19:23 IST
ಕಬ್ಬನ್‌ಪೇಟೆಯ 23ನೇ ಅಡ್ಡರಸ್ತೆಯಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ ಅನ್ನು ಪೂರ್ಣವಾಗಿ ಸ್ವಚ್ಛಗೊಳಿಸದೆ, ಮೇಲ್ಭಾಗದ ಕಲ್ಮಶವನ್ನು ರಸ್ತೆಯಲ್ಲೇ ಹಾಕಿರುವುದು
ಕಬ್ಬನ್‌ಪೇಟೆಯ 23ನೇ ಅಡ್ಡರಸ್ತೆಯಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ ಅನ್ನು ಪೂರ್ಣವಾಗಿ ಸ್ವಚ್ಛಗೊಳಿಸದೆ, ಮೇಲ್ಭಾಗದ ಕಲ್ಮಶವನ್ನು ರಸ್ತೆಯಲ್ಲೇ ಹಾಕಿರುವುದು   

ಬೆಂಗಳೂರು: ಕಬ್ಬನ್‌ಪೇಟೆಯ 23ನೇ ಅಡ್ಡರಸ್ತೆಯಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ ತುಂಬಿಕೊಂಡು, ಒಳಚರಂಡಿ ನೀರು ಹರಿಯದಿರುವುದರಿಂದ ಪಕ್ಕದ ಮನೆಗಳಲ್ಲಿರುವ ಕುಡಿಯುವ ನೀರಿನ ಸಂಪ್‌ಗಳಿಗೆ ಕಲ್ಮಶದ ನೀರು ಹರಿಯುತ್ತಿದೆ.

‘ಒಳಚರಂಡಿ ಮ್ಯಾನ್‌ಹೋಲ್‌ ತುಂಬಿ ಹರಿಯುತ್ತಿರುವುದು ಹಾಗೂ ಮನೆಗಳ ಸಂಪ್‌ಗಳಿಗೆ ಒಳಚರಂಡಿ ನೀರು ಹರಿಯುತ್ತಿದೆ ಎಂದು ಬನ್ನಪ್ಪ ಪಾರ್ಕ್‌ ಸೇವಾ ಕೇಂದ್ರದಲ್ಲಿ 15 ದಿನಗಳಿಂದ ಹಲವು ಬಾರಿ ದೂರು ನೀಡಿದ್ದೇವೆ. ಕೇಂದ್ರದಲ್ಲಿರುವ ಕಡತದಲ್ಲಿ ದೂರು ದಾಖಲಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಮನೆ ನಂ. 4/1ರ ನಿವಾಸಿ ಕೃಷ್ಣಮೂರ್ತಿ ಅವರು ದೂರಿದರು.

‘ಮ್ಯಾನ್‌ಹೋಲ್‌ ತುಂಬಿ ಹರಿಯುತ್ತಿದ್ದು ಬೇಗ ಕ್ರಮ ಕೈಗೊಳ್ಳಿ ಎಂದು ಸಾಕಷ್ಟು ಬಾರಿ ಒತ್ತಾಯಿಸಿದ ಬಳಿಕ ಬಂದ ಇಬ್ಬರು ಸಿಬ್ಬಂದಿ ಮ್ಯಾನ್‌ಹೋಲ್‌ನ ಮೇಲ್ಭಾಗವನ್ನು ಸ್ವಚ್ಛಗೊಳಿಸಿದಂತೆ ಮಾಡಿ, ಕಲ್ಮಶವನ್ನೆಲ್ಲ ಪಕ್ಕದ್ದಲ್ಲೇ ಸುರಿದು ಹೋಗಿದ್ದಾರೆ. ಪೂರ್ಣ ಸ್ವಚ್ಛಗೊಳಿಸಿ ಎಂದು ಒತ್ತಾಯಿಸಿದರೂ ಮಾಡಿಲ್ಲ. ಹೀಗಾಗಿ ಮತ್ತೆ ಒಳಚರಂಡಿ ನೀರು ಸಂಪ್‌ಗಳಿಗೆ ಹರಿಯುತ್ತಿದೆ’ ಎಂದರು.

ADVERTISEMENT

‘ಡೆಂಗಿ ಹಾಗೂ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸಂಪ್‌ಗಳಿಗೆ ಒಳಚರಂಡಿ ನೀರು ಹರಿದರೆ ಆರೋಗ್ಯ ಹದಗೆಡುತ್ತದೆ. ಅಕ್ಕಪಕ್ಕದ ಮೂರ್ನಾಲ್ಕು ಮನೆಯವರು  ನೀರು ಕುಡಿಯದಂತಹ ಸ್ಥಿತಿ ಉಂಟಾಗಿದೆ. ಜಲಮಂಡಳಿ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.