ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್ ರೇವಣ್ಣ ಸಿಐಡಿ ಕಸ್ಟಡಿ ಅಂತ್ಯ ಇಂದು

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 0:30 IST
Last Updated 1 ಜುಲೈ 2024, 0:30 IST
ಸೂರಜ್ ರೇವಣ್ಣ 
ಸೂರಜ್ ರೇವಣ್ಣ    

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತ ಆರೋಪಿ, ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯ ಸೂರಜ್‌ ರೇವಣ್ಣ ಅವರ ಸಿಐಡಿ ಕಸ್ಟಡಿ ಜುಲೈ 1ಕ್ಕೆ ಅಂತ್ಯವಾಗಲಿದ್ದು, ಹೆಚ್ಚಿನ ವಿಚಾರಣೆಗಾಗಿ ಮತ್ತೆ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ.

ಯುವಕರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪದಡಿ ಸೂರಜ್ ಅವರನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಜೂನ್‌ 22ರಂದು ಬಂಧಿಸಿದ್ದರು. ನಂತರ, ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿತ್ತು.

ಸಿಐಡಿ ಪೊಲೀಸರು ಜೂನ್‌ 23ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಎದುರು ಆರೋಪಿಯನ್ನು ಹಾಜರು ಪಡಿಸಿ ಕಸ್ಟಡಿಗೆ ಪಡೆದಿದ್ದರು. ಇದಾದ ಮೇಲೆ ಮತ್ತೊಬ್ಬ ಸಂತ್ರಸ್ತ, ಸೂರಜ್‌ ವಿರುದ್ಧ ದೂರು ನೀಡಿದ್ದು, ಆ ಪ್ರಕರಣವನ್ನೂ ಸಿಐಡಿಗೆ ಒಪ್ಪಿಸಲಾಗಿದೆ. ಆರೋಪಿಯನ್ನು ಸೋಮವಾರ ಕೋರ್ಟ್‌ಗೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಕೇಳಲಾಗುವುದು ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಾಕ್ಷ್ಯ ಮುಂದಿಟ್ಟು ವಿಚಾರಣೆ

‘ಸಿಐಡಿ ಕಚೇರಿಯಲ್ಲಿ ಸೂರಜ್‌ ಅವರ ವಿಚಾರಣೆ ನಡೆಸಲಾಗಿದೆ. ಕೆಲವು ಸಾಕ್ಷ್ಯ ಮುಂದಿಟ್ಟು ಪ್ರಶ್ನಿಸಲಾಗಿದೆ. ಸಂತ್ರಸ್ತನ ದೂರಿನಲ್ಲಿರುವ ಅಂಶಗಳು, ಸಂತ್ರಸ್ತನ ಜತೆಗೆ ಸೂರಜ್ ಮಾತನಾಡಿದ್ದಾರೆ ಎನ್ನಲಾದ ಸಂಭಾಷಣೆ ಸೇರಿ ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ಪ್ರಶ್ನೆ ಕೇಳಲಾಗಿದೆ. ಸೂರಜ್ ಅವರು ಕೆಲ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ’ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

‘ಸೂರಜ್ ಅವರ ವೈದ್ಯಕೀಯ ಪರೀಕ್ಷೆಯ ವರದಿ ಶೀಘ್ರದಲ್ಲೇ ಬರಲಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.