ಬೆಂಗಳೂರು: ರಾಜ್ಯದ ಖಾಸಗಿ ಶಾಲೆಗಳಲ್ಲಿ ಪ್ರವೇಶ ಶುಲ್ಕ ಸೇರಿ ವಿವಿಧ ಶುಲ್ಕಗಳನ್ನು ಹೆಚ್ಚಿಸಿರುವ ಕ್ರಮವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಖಂಡಿಸಿದೆ.
ನಿಯಮ ಬಾಹಿರವಾಗಿ ಶುಲ್ಕ ಹೆಚ್ಚಿಸಿರುವ ರಾಜ್ಯದ ಖಾಸಗಿ ಶಾಲೆಗಳ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಹಾಗೂ ಇಲಾಖೆ ಆಯುಕ್ತೆ ಬಿ.ಬಿ.ಕಾವೇರಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ರಾಜ್ಯದ ಬಹುತೇಕ ಖಾಸಗಿ ಶಾಲೆಗಳು 2024-25ನೇ ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ, ಶೂ–ಸಾಕ್ಸ್, ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್, ಬೋಧನಾ ಶುಲ್ಕ ಸೇರಿ ವಿವಿಧ ಶುಲ್ಕ ಹೆಚ್ಚಳ ಮಾಡಿವೆ ಎಂದು ಎಸ್‌ಎಫ್‌ಐ ಪದಾಧಿಕಾರಿಗಳು ದೂರಿದ್ದಾರೆ.
ಬೇಬಿ ಸಿಟ್ಟಿಂಗ್‌ನಿಂದ ಹಿಡಿದು ಎಲ್ಲ ತರಗತಿಯ ಪ್ರವೇಶ ಶುಲ್ಕವನ್ನೂ ಹೆಚ್ಚಿಸಲಾಗಿದೆ. ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಸರ್ಕಾರದ ನಿಯಮ ಮೀರಿ ಹಣ ವಸೂಲಿಗೆ ಮುಂದಾದರೂ ಶಿಕ್ಷಣ ಇಲಾಖೆ ಮೌನವಾಗಿರುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.
ಶಿಕ್ಷಣ ಕಾಯ್ದೆ ಉಲ್ಲಂಘಿಸಿ ಬಹುತೇಕ ಶಾಲೆಗಳಲ್ಲಿ ಬಟ್ಟೆ, ಶೂ,ಸಾಕ್ಸ್, ನೋಟ್ ಬುಕ್ ಅನ್ನು ಶಾಲೆಗಳಲ್ಲಿ ಮಾರಾಟ ಮಾಡುತ್ತಿರುವುದು ಕಾನೂನು ಬಾಹಿರ. ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮಸ್ಯೆಗಳ ಪರಿಹಾರಕ್ಕಾಗಿ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಜಂಟಿ ಸಭೆ ಮಾಡಬೇಕು. ಎಸ್ಎಫ್ಐ ಸಂಘಟನೆ ಮುಂಖಡರನ್ನೂ ಸಭೆಗೆ ಆಹ್ವಾನಿಸಬೇಕು ಎಂದು ಆಗ್ರಹಿಸಿದರು.
ಎಸ್ಎಫ್ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ, ಕಾರ್ಯದರ್ಶಿ ಭೀಮನಗೌಡ, ಪದಾಧಿಕಾರಿಗಳಾದ ಶಿವಕುಮಾರ್ ಮ್ಯಾಗಳಮನಿ, ರಮೇಶ ವೀರಾಪೂರು, ಶಿವಪ್ಪ, ವಿಶ್ವ ಅಂಗಡಿ, ಚಿದಾನಂದ, ಬಾಬು ಮನವಿ ಸಲ್ಲಿಕೆ ವೇಳೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.