ಬೆಂಗಳೂರು: ‘ಹದಗೆಟ್ಟಿರುವ ಇಂದಿನ ಸಾಮಾಜಿಕ, ರಾಜಕೀಯ ಪರಿಸ್ಥಿತಿಗೆ ಕುವೆಂಪು ಅವರ ಓದು ಔಷಧವಾಗಲಿದೆ’ ಎಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ತಿಳಿಸಿದರು.
ಕನ್ನಡ ಜನಶಕ್ತಿ ಕೇಂದ್ರ ಹಾಗೂ ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನಗರದಲ್ಲಿ ಗುರುವಾರ ಜಂಟಿಯಾಗಿ ಆಯೋಜಿಸಿದ್ದ ಕುವೆಂಪು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. ‘20ನೇ ಶತಮಾನದ ಪೂರ್ವಾರ್ಧಲ್ಲಿ ಬರವಣಿಗೆಯಲ್ಲಿ ತೊಡಗಿಕೊಂಡಿದ್ದ ಕುವೆಂಪು ಅವರು, ಯುಗಪ್ರಜ್ಞೆಯ ಕವಿಯಾಗಿದ್ದರು. ಅವರ ಬರಹ ದೇಶದ ಸಾಂಸ್ಕೃತಿಕ ಇತಿಹಾಸವನ್ನು ಸಮಗ್ರತೆಯಲ್ಲಿ ಸಂವೇದಿಸಿದಂತೆ ಕಟ್ಟಿತು.ರವೀಂದ್ರನಾಥ ಟ್ಯಾಗೋರ್ ಅವರಿಗೆ ಸಮವಾಗಿ ನಿಲ್ಲಬಲ್ಲ ಸಮಗ್ರ ದೃಷ್ಟಿಕೋನದ ಕವಿ ಕುವೆಂಪು. ಈ ದೇಶದ ಚರಿತ್ರೆ, ಪುರಾಣ ಪರಂಪರೆಯನ್ನು ಅರ್ಥ ಮಾಡಿಕೊಂಡಂತೆ ಅವರು ಸಾಹಿತ್ಯ ರಚಿಸಿದರು’ ಎಂದು ಹೇಳಿದರು.
‘ಈ ಹೊತ್ತಿನಲ್ಲಿ ಯುವಜನರು ಕುವೆಂಪು ಅವರನ್ನು ಓದುವ ಅಗತ್ಯವಿದೆ. ನಿರಂಕುಶಮತಿಗಳಾಗಿ ಬಾಳಬೇಕಾದರೆ ಕುವೆಂಪು ಅಧ್ಯಯನ ಅನಿವಾರ್ಯ’ ಎಂದರು.
ಸಾಹಿತಿ ಕೆ. ಮರುಳಸಿದ್ದಪ್ಪ, ‘ಕುವೆಂಪು ಅವರು ಕಾವ್ಯ, ನಾಟಕ, ಕಥೆ, ಕಾದಂಬರಿ ಸೇರಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಸಾಹಿತ್ಯವು ವೈಚಾರಿಕ ಪ್ರಜ್ಞೆಯಿಂದ ಕೂಡಿರುತ್ತಿತ್ತು. ಅವರು ಕನ್ನಡಿಗರಲ್ಲಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿದರು. ಅವರ ವಿಚಾರಗಳನ್ನು ಪುನರ್ಮನನ ಮಾಡಿಕೊಳ್ಳಬೇಕು. ಅವರು ಈ ನಾಡಿಗೆ ಶಕ್ತಿಯಾಗಿದ್ದರು’ ಎಂದು ಹೇಳಿದರು.
ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ, ‘ಕುವೆಂಪು ಅವರು ಬರವಣಿಗೆಗೆ ಸಂಬಂಧಿಸಿದಂತೆ ಯಾರ ಜತೆಗೂ ರಾಜಿ ಮಾಡಿಕೊಂಡಿರಲಿಲ್ಲ. ಅನ್ಯಾಯದ ವಿರುದ್ಧ ಎದ್ದು ನಿಲ್ಲುತ್ತಿದ್ದ ಗಟ್ಟಿ ಧ್ವನಿ ಅವರದ್ದಾಗಿತ್ತು. ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎನ್ನುವುದನ್ನು ಅವರು ತೋರಿಸಿಕೊಟ್ಟರು’ ಎಂದು ತಿಳಿಸಿದರು.
ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ಹಾಗೂ ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.