ಬೆಂಗಳೂರು: ಶಾಂಭವಿ ನೃತ್ಯ ಶಾಲೆ ಕನಕಪುರ ರಸ್ತೆಯ ಶಂಕರ ಫೌಂಡೇಷನ್‌ನಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ಡಾನ್ಸ್ ಜಾತ್ರೆ’ಗೆ ಶನಿವಾರ ಚಾಲನೆ ದೊರೆಯಿತು. ನೃತ್ಯ ಕಲೆಗಳ ವೈಭವ ಅನಾವರಣಗೊಂಡಿತು.
ಕಿರಿಯರು ಹಾಗೂ ಹಿರಿಯರ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಅಹಮದಾಬಾದ್‌ನ ಸಂಜುಕ್ತ ಸಿನ್ಹಾ ಅವರಿಂದ ಕಥಕ್, ಚೆನ್ನೈನ ಶೀಲಾ ಉನ್ನಿಕೃಷ್ಣನ್ ಅವರಿಂದ ಭರತನಾಟ್ಯ ಹಾಗೂ ಅಹಮದಾಬಾದ್‌ನ ಭೂಮಿ ಠಕ್ಕರ್ ಅವರಿಂದ ದಾಂಡಿಯ ನೃತ್ಯದ ಬಗ್ಗೆ ಕಾರ್ಯಾಗಾರಗಳು ನಡೆದವು.
ಕಲಾಕ್ಷಿತಿ ಸಂಸ್ಥೆಯ ನಿರ್ದೇಶಕ ಎಂ.ಆರ್. ಕೃಷ್ಣಮೂರ್ತಿ ಚಾಲನೆ ನೀಡಿದರು. ಸಂಜುಕ್ತ ಸಿನ್ಹಾ, ಶೀಲಾ ಉನ್ನಿಕೃಷ್ಣನ್, ಭೂಮಿ ಠಾಕೂರ್, ಸುಧೀರ್ ರಾವ್, ನಿರೂಪಮಾ ರಾಜೇಂದ್ರ ಹಾಗೂ ಕಲಾವಿದರ ತಂಡವು ಕಥಕ್, ಕೂಚಿಪುಡಿ, ಭರತನಾಟ್ಯ ಸೇರಿ ವಿವಿಧ ಕಲಾ ಪ್ರಕಾರಗಳಲ್ಲಿ ಪ್ರದರ್ಶನ ನೀಡಿತು.
‘ನೃತ್ಯದಂತಹ ಪ್ರದರ್ಶನ ಕಲೆಯನ್ನು ಕಲಾವಿದರು, ವಿಮರ್ಶಕರು, ಕಲಾಸಕ್ತರು ಒಂದೇ ವೇದಿಕೆಯಡಿ ಆಸ್ವಾದಿಸಲಿ ಎಂದು ಈ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಶಾಂಭವಿ ನೃತ್ಯ ಶಾಲೆಯ ವೈಜಯಂತಿ ಕಾಶಿ ತಿಳಿಸಿದರು.
ಭಾನುವಾರವು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕನಕಪುರ ರಸ್ತೆಯ ಶಂಕರ ಫೌಂಡೇಷನ್‌ನಲ್ಲಿ (ದೊಡ್ಡಕಲ್ಲಸಂದ್ರ ಮೆಟ್ರೊ ನಿಲ್ದಾಣದ ಬಳಿ) ನೃತ್ಯ ಪ್ರದರ್ಶನ, ಸ್ಪರ್ಧೆ ಹಾಗೂ ಕಾರ್ಯಾಗಾರಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.