ಬೆಂಗಳೂರು: ಪ್ರತಿಷ್ಠಿತ ಬಡಾವಣೆಗಳಿಂದ ಹಿಡಿದು ಕೊಳೆಗೇರಿ ಪ್ರದೇಶಗಳನ್ನು ಒಳಗೊಂಡಿರುವ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನ ಅಲಂಕರಿಸಲು ಕಾಂಗ್ರೆಸ್–ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಪ್ರತಿ ಚುನಾವಣೆಯಲ್ಲಿ 3ನೇ ಸ್ಥಾನದಲ್ಲಿರುವ ಜೆಡಿಎಸ್ ಸಹ ಈ ಬಾರಿ ಪಾರುಪತ್ಯ ಸ್ಥಾಪಿಸಲು ತಂತ್ರ ರೂಪಿಸುತ್ತಿದೆ.
ಶಾಂತಲಾನಗರ, ದೊಮ್ಮಲೂರು, ಜೋಗುಪಾಳ್ಯ, ಅಗರ, ಶಾಂತಿನಗರ, ನೀಲಸಂದ್ರ ಹಾಗೂ ವನ್ನಾರಪೇಟೆ ವಾರ್ಡ್ ಒಳಗೊಂಡಿರುವ ಕ್ಷೇತ್ರದ ಹಲವು ಪ್ರದೇಶಗಳು ದೇಶ–ವಿದೇಶಗಳಲ್ಲಿ ಹೆಸರುವಾಸಿ. ಎಂ.ಜಿ. ರಸ್ತೆ, ಚರ್ಚ್‌ಸ್ಟ್ರೀಟ್, ಬ್ರಿಗೇಡ್ ರಸ್ತೆಗಳು ಈ ಕ್ಷೇತ್ರದ ಮುಕುಟಮಣಿಗಳು.
15 ವರ್ಷದಿಂದ ಕಾಂಗ್ರೆಸ್ ತೆಕ್ಕೆಯಲ್ಲಿರುವ ಕ್ಷೇತ್ರವನ್ನು ಈ ಬಾರಿಯಾದರೂ ತಮ್ಮದಾಗಿಸಿಕೊಳ್ಳಲು ಬಿಜೆಪಿ ಕಸರತ್ತು ಆರಂಭಿಸಿದೆ. ಇದರ ಜೊತೆಯಲ್ಲಿ ಜೆಡಿಎಸ್ ಹಾಗೂ ಆಮ್ ಆದ್ಮಿ ಪಾರ್ಟಿ ಸಹ ಮತ ಸೆಳೆಯಲು ಬಿರುಸಿನ ಪ್ರಚಾರದಲ್ಲಿ ತೊಡಗಿವೆ.
2008ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಎನ್.ಎ. ಹ್ಯಾರಿಸ್, ಬಿಜೆಪಿ ಅಭ್ಯರ್ಥಿ ಡಿ.ಯು. ಮಲ್ಲಿಕಾರ್ಜುನ್ ವಿರುದ್ಧ 13,797 ಮತಗಳ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದರು. ಅದಾದ ಬಳಿಕ, 2013 ಹಾಗೂ 2018ರ ಚುನಾವಣೆಯಲ್ಲೂ ಹ್ಯಾರಿಸ್ ವಿಜಯ ಪತಾಕೆ ಹಾರಿಸಿದ್ದಾರೆ. 2018ರಲ್ಲಿ ಬಿಜೆಪಿಯ ವಾಸುದೇವ ಮೂರ್ತಿ ಅವರನ್ನು ಮಣಿಸಿದ್ದರು.
‘ಹ್ಯಾಟ್ರಿಕ್’ ವಿಜಯ ಸಾಧಿಸಿ ಖುಷಿಯಲ್ಲಿರುವ ಹ್ಯಾರಿಸ್, ನಾಲ್ಕನೇ ಬಾರಿಯೂ ಗೆಲುವು ತಮ್ಮದೆಂದು ಬಿರುಸಿನ ಪ್ರಚಾರಕ್ಕೆ ಇಳಿದಿದ್ದಾರೆ. ಅವರನ್ನು ಹೇಗಾದರೂ ಮಾಡಿ ಮಣಿಸಬೇಕೆಂದು ಪಣ ತೊಟ್ಟಿರುವ ಬಿಜೆಪಿ, ವನ್ನಾರಪೇಟೆ ಕಾರ್ಪೊರೇಟರ್ ಆಗಿದ್ದ ಕೆ. ಶಿವಕುಮಾರ್ ಅವರನ್ನು ಕಣಕ್ಕೆ ಇಳಿಸಿದೆ.
ಬಿಜೆಪಿಯ ಶಾಂತಿನಗರ ಮಂಡಲ ಅಧ್ಯಕ್ಷರೂ ಆಗಿರುವ ಶಿವಕುಮಾರ್, ಕ್ಷೇತ್ರದ ಮತದಾರರ ಮನೆ ಮನೆಗೆ ಹೋಗಿ ಮತಯಾಚನೆ ಮಾಡುತ್ತಿದ್ದಾರೆ. ‘15 ವರ್ಷಗಳ ಪಾರುಪತ್ಯಕ್ಕೆ ಅಂತ್ಯ ಹಾಡಿ. ಈ ಬಾರಿ ಬದಲಾವಣೆ ತನ್ನಿ’ ಎಂದು ಕೋರುತ್ತಿದ್ದಾರೆ.
ಹ್ಯಾರಿಸ್, ‘15 ವರ್ಷ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿದಿದ್ದೇನೆ. ಅಭಿವೃದ್ಧಿ ನೋಡಿ ಮತ ಹಾಕಿ’ ಎಂದು ಮತ ಕೇಳುತ್ತಿದ್ದಾರೆ.
ಕ್ಷೇತ್ರದಲ್ಲಿ ಜೆಡಿಎಸ್ ಸಹ ಸಾಂಪ್ರದಾಯಕ ಮತಗಳನ್ನು ಹೊಂದಿದೆ. 2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶ್ರೀಧರ್ ರೆಡ್ಡಿ, 13,569 ಮತ ಪಡೆದು ಮೂರನೇ ಸ್ಥಾನದಲ್ಲಿದ್ದರು. ಈ ಬಾರಿ ಜೆಡಿಎಸ್‌ನಿಂದ ಎಚ್. ಮಂಜುನಾಥ್ ಕಣದಲ್ಲಿದ್ದು, ಮತಗಳ ಪ್ರಮಾಣ ಹೆಚ್ಚಾಗುವ ವಾತಾವರಣವಿದೆ.
2018ರ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ರೇಣುಕಾ ವಿಶ್ವನಾಥನ್ ಕಣದಲ್ಲಿದ್ದರು. 2,658 ಮತ ಪಡೆದು ನಾಲ್ಕನೇ ಸ್ಥಾನದಲ್ಲಿದ್ದರು. ಈ ಬಾರಿ ಆಮ್ ಆದ್ಮಿ ಪಾರ್ಟಿಯಿಂದ ಕೆ. ಮಥಾಯ್ ಕಣಕ್ಕೆ ಇಳಿದಿದ್ದಾರೆ. ಮಾಜಿ ಕೆಎಎಸ್ ಅಧಿಕಾರಿಯಾಗಿರುವ ಮಥಾಯ್, ಈ ಹಿಂದೆ ಬಿಬಿಎಂಪಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡಿದವರು. ಕ್ಷೇತ್ರದಲ್ಲಿ ತಮ್ಮದೇ ಮತದಾರರ ಗುಂಪು ಹೊಂದಿರುವ ಅವರು ಗೆಲುವಿನ ವಿಶ್ವಾಸದಲ್ಲಿದ್ದಾರೆ.
ಕ್ಷೇತ್ರದಲ್ಲಿ 199 ಮತಗಟ್ಟೆಗಳಿವೆ. ಎಲ್ಲ ಧರ್ಮ–ಜಾತಿ ಜನರಿರುವ ಕ್ಷೇತ್ರದಲ್ಲಿ ‘ನಾವೆಲ್ಲರೂ ಒಂದೇ’ ಎಂಬ ಜಪ ಪಠಿಸಿ ಅಭ್ಯರ್ಥಿಗಳು ಮತಯಾಚನೆ ಮಾಡುತ್ತಿದ್ದಾರೆ. ಎಲ್ಲ ಅಭ್ಯರ್ಥಿಗಳಿಗೂ ನಮಸ್ಕರಿಸಿ ಬೀಳ್ಕೊಡುತ್ತಿರುವ ಮತದಾರರು ಮಾತ್ರ ಮತದಾನದ ಗುಟ್ಟು ಬಿಟ್ಟು ಕೊಟ್ಟಿಲ್ಲ.
‘ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪ್ರತಿ ಚುನಾವಣೆಯಲ್ಲೂ ನೇರ ಹಣಾಹಣಿ ಇದೆ. ಮತದಾರರಲ್ಲಿ ಹ್ಯಾರಿಸ್ ಪರ ಹೆಚ್ಚು ಒಲವಿದೆ. ಬಿಜೆಪಿ ಅಭ್ಯರ್ಥಿಯ ಪರವೂ ಬೆಂಬಲವಿದೆ. ಹೀಗಾಗಿ, ಗೆಲುವು ಯಾರದ್ದು ಎಂಬುದು ನಿಖರವಾಗಿ ಹೇಳಲಾಗದು’ ಎಂದು ಮತದಾರರು ಹೇಳುತ್ತಿದ್ದಾರೆ.
ಬಹುಜನ ಸಮಾಜ ಪಾರ್ಟಿಯಿಂದ (ಬಿಎಸ್‌ಪಿ) ಎಂ. ಸತೀಶ್ ಚಂದ್ರ, ಇಂಡಿಯನ್ ಕ್ರಿಶ್ಚಿಯನ್ ಫ್ರಂಟ್‌ನಿಂದ ಆಂಟೋನಿ ಎ. ಸಂತೋಷ್, ಅಖಿಲ ಭಾರತ ಮಹಿಳಾ ಎಂಪವರ್‌ಮೆಂಟ್ ಪಾರ್ಟಿಯಿಂದ ಡಿ. ರುಬೆನ್ ಮೊಸಸ್, ಕರ್ನಾಟಕ ರಾಷ್ಟ್ರ ಸಮಿತಿಯ ರೊನಾಲ್ಡ್ ಸೊಹಾನ್ಸ್ ಎ., ಭಾರತೀಯ ಪ್ರಜಾಗಳ ಕಲ್ಯಾಣ ಪಕ್ಷದಿಂದ ಸೈಯದ್ ಆಸಿಫ್ ಬುಖಾರಿ ಕಣದಲ್ಲಿದ್ದಾರೆ. ಕೆ. ನಟರಾಜು ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.