ADVERTISEMENT

ಬೆಂಗಳೂರಿಗೆ ಶರಾವತಿ ನೀರು: ಯೋಜನೆ ಕೈಬಿಡುವಂತೆ ಮುಖ್ಯಮಂತ್ರಿಗೆ ಬಹಿರಂಗ ಪತ್ರ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2024, 0:15 IST
Last Updated 20 ಆಗಸ್ಟ್ 2024, 0:15 IST
   

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದ ಶರಾವತಿ ಹಿನ್ನೀರು ಪ್ರದೇಶದಿಂದ ಬೆಂಗಳೂರು ಮಹಾನಗರಕ್ಕೆ ನೀರು ತರುವ ಯೋಜನೆ ಕೈಬಿಟ್ಟು ಪಶ್ಚಿಮಘಟ್ಟ ವನ್ನು ಉಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಡಿನ ಪ್ರಜ್ಞಾವಂತರು ಬಹಿರಂಗ ಪತ್ರ ಬರೆದಿದ್ದಾರೆ.

ಜಗತ್ತಿನ ಅತ್ಯಂತ ಅಪರೂಪದ, ಅತಿ ಸೂಕ್ಷ್ಮ ಜೀವ ವೈವಿಧ್ಯದ ತಾಣವಾದ ಶರಾವತಿ ಕೊಳ್ಳದಿಂದ ನೀರು ತರುವ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ಮತ್ತೆ ಮುಂದಾಗಿದೆ. ಆದರೆ, ಈ ಯೋಜನೆ ಶರಾವತಿ ಕೊಳ್ಳವಷ್ಟೇ ಅಲ್ಲದೆ, ಪಶ್ಷಿಮಘಟ್ಟದ ಪರಿಸರ ಸಮತೋಲನದ ಮೇಲೆ ಅಪಾಯಕಾರಿ ಪರಿಣಾಮ ಬೀರಲಿದೆ ಎಂದು ಈಗಾಗಲೇ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು, ಹಲವು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

‘2019ರಲ್ಲಿ ಬಿಜೆಪಿ ನೇತೃತ್ವದ ಆಡಳಿತ ಮಲೆನಾಡು ಜನರ ನಿರಂತರ ಹೋರಾಟಕ್ಕೆ ಮಣಿದು ಯೋಜನೆಯನ್ನು ಕೈಬಿಟ್ಟಿತ್ತು. 5 ವರ್ಷಗಳಲ್ಲೇ ಸರ್ಕಾರ ಮತ್ತೊಮ್ಮೆ ಶರಾವತಿ ನದಿ ನೀರಿನ ಮೇಲೆ ದೃಷ್ಟಿ ನೆಟ್ಟಿದೆ. ಆದರೆ, ರಾಜ್ಯದ ಅತ್ಯಂತ ಅಪರೂಪದ ಸಿಂಗಳೀಕ (ಲೈಯನ್ ಟೇಲ್ಡ್ ಮಕಾಕಿ– ಎಲ್‌ಟಿಎಂ) ಸಂರಕ್ಷಿತ ಅಭ್ಯಯಾರಣ್ಯವನ್ನೂ ಒಳಗೊಂಡಂತೆ ಮಹತ್ವದ ಜೀವ ಸಂಕುಲ, ಸಾವಿರಾರು ಎಕರೆ ಕಾಡು ಮತ್ತು ರೈತಾಪಿ ಜನರ ಜಮೀನು ನಾಶ ಮಾಡಿ, ₹ 12,000 ಕೋಟಿ ರೂಪಾಯಿಗೂ ಹೆಚ್ಚು ಜನರ ತೆರಿಗೆ ಹಣ ಪೋಲು ಮಾಡುವ ಈ ಯೋಜನೆಗೆ ನಮ್ಮ ಸ್ಪಷ್ಟ ವಿರೋಧವಿದೆ. ಏಕೆಂದರೆ, ಜೀವನದಿಯನ್ನು ಬತ್ತಿಸಿ ಬೆಂಗಳೂರಿಗೆ ನೀರು ತರುವುದು ವೈಜ್ಞಾನಿಕವಾಗಿ ಮಾತ್ರವಲ್ಲದೆ, ವಿವೇಚನೆಯ ದೃಷ್ಟಿಯಿಂದಲೂ ಒಪ್ಪುವಂತಹ ಚಿಂತನೆಯಲ್ಲ’ ಎಂದು ತಿಳಿಸಲಾಗಿದೆ.

ADVERTISEMENT

ಎತ್ತಿನಹೊಳೆ ಯೋಜನೆ ಗಮನಿಸಿ ದರೆ ಇದು ಮೂಲತಃ ಗುತ್ತಿಗೆದಾರರ ಮೂಲಕ ಭ್ರಷ್ಟಾಚಾರದ ಹೊಳೆ ಹರಿಸುವ ಇನ್ನೊಂದು ಯೋಜನೆಯಾಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಬೆಂಗಳೂರಿಗೆ ಅಗತ್ಯವಿರುವ 15 ಟಿಎಂಸಿ ಅಡಿಗಿಂತ ಅಧಿಕ ನೀರು ಸಿಗುವ ಮಹಾನಗರದಲ್ಲಿ ಮಳೆ ನೀರು ಇಂಗಿಸುವ ಮತ್ತು ಕೆರೆಕಟ್ಟೆಗಳ ಪುನರುಜ್ಜೀವನ ಕೈಗೆತ್ತಿಕೊಳ್ಳುವುದೊಂದೇ ವಿವೇಚನೆಯ ಮಾರ್ಗ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಶರಾವತಿ ನೀರನ್ನು ಬೆಂಗಳೂರಿಗೆ ತರುವ ಪರಿಸರ ಘಾತುಕ, ಜೀವವಿರೋಧಿ ಯೋಜನೆ ಕೈಬಿಡಬೇಕು. ಆ ಮೂಲಕ ನಾಡಿನ ಕಾಡು ಮತ್ತು ನಾಡಿನ ಸ್ವಾಸ್ಥ್ಯ ಕಾಯುವ ತನ್ನ ಹೊಣೆಗಾರಿಕೆ ತೋರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗಿದೆ.ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟದ ಪರವಾಗಿ ಸಾಹಿತಿಗಳಾದ ನಾ.ಡಿಸೋಜಾ, ಬಂಜಗೆರೆ ಜಯಪ್ರಕಾಶ್, ರಹಮತ್ ತರೀಕೆರೆ, ಪುರುಷೋತ್ತಮ ಬಿಳಿಮಲೆ, ರಾಜೇಂದ್ರ ಚೆನ್ನಿ, ಶ್ರೀಕಂಠ ಕೂಡಿಗೆ, ಕವಲಕ್ಕಿಯ ಡಾ.ಎಚ್‌.ಎಸ್.ಅನುಪಮಾ, ಹಿರಿಯ ಪತ್ರಕರ್ತ ನಾಗೇಶ ಹೆಗಡೆ, ಹೊಸನಗರ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಹೆಗ್ಗೋಡಿನ ಚಿದಂಬರರಾವ್ ಜಂಬೆ, ಧಾರವಾಡದ ಶಾರದಾ ಗೋಪಾಲ, ಮೈಸೂರಿನ ಹೊರೆಯಾಲ ದೊರೆಸ್ವಾಮಿ, ಕಲಬುರ್ಗಿಯ ಡಾ.ಪ್ರತಾಪ್‌ ಸಿಂಗ್ ತಿವಾರಿ, ಚಿಕ್ಕಬಳ್ಳಾಪುರದ ಆಂಜನೇಯ ರೆಡ್ಡಿ, ರೈತ ಸಂಘದ ಕೆ.ಟಿ.ಗಂಗಾಧರ, ಎಚ್‌.ಆರ್.ಬಸವರಾಜಪ್ಪ ಸೇರಿದಂತೆ 65 ಜನ ಸಹಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.