ADVERTISEMENT

ಶೆಟ್ಟರ್‌, ಚತುರ್ವೇದಿಗೆ ನುಡಿನಮನ

ಕಸಾಪ ಆವರಣದಲ್ಲಿ ಕಾರ್ಯಕ್ರಮ * ಮಹನೀಯರ ಸೇವೆ, ಕೊಡುಗೆ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 23:24 IST
Last Updated 9 ಮಾರ್ಚ್ 2020, 23:24 IST
ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ ಪಂಡಿತ ಸುಧಾಕರ ಚತುರ್ವೇದಿ ಹಾಗೂ ಸಂಶೋಧನಕಾರ ಡಾ. ಷ.ಶೆಟ್ಟರ್ ಅವರ ಭಾವಚಿತ್ರಕ್ಕೆ ನ.ರವಿಕುಮಾರ್, ಜಯಂತಿ ಮನೋಹರ್, ಕಸಾಪ ಅಧ್ಯಕ್ಷ ಮನು ಬಳಿಗಾರ್, ಎಸ್. ಆರ್. ರಾಮಸ್ವಾಮಿ ಹಾಗೂ ಪಿ. ಮಲ್ಲಿಕಾರ್ಜುನಪ್ಪ ಪುಷ್ಪನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ ಪಂಡಿತ ಸುಧಾಕರ ಚತುರ್ವೇದಿ ಹಾಗೂ ಸಂಶೋಧನಕಾರ ಡಾ. ಷ.ಶೆಟ್ಟರ್ ಅವರ ಭಾವಚಿತ್ರಕ್ಕೆ ನ.ರವಿಕುಮಾರ್, ಜಯಂತಿ ಮನೋಹರ್, ಕಸಾಪ ಅಧ್ಯಕ್ಷ ಮನು ಬಳಿಗಾರ್, ಎಸ್. ಆರ್. ರಾಮಸ್ವಾಮಿ ಹಾಗೂ ಪಿ. ಮಲ್ಲಿಕಾರ್ಜುನಪ್ಪ ಪುಷ್ಪನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ತಮಿಳು ಲಿಪಿಯು ಕನ್ನಡ ಲಿಪಿಗಿಂತಲೂ ಸುಮಾರು ಇನ್ನೂರು ವರ್ಷ ‘ಜೂನಿಯರ್‌’ ಎಂದು ತಮ್ಮ ಸಂಶೋಧನೆಗಳ ಮೂಲಕ ಸ್ಥಾಪಿಸಿದ ಷ. ಶೆಟ್ಟರ್‌ ಅಂತರರಾಷ್ಟ್ರೀಯ ಖ್ಯಾತಿಯ ಸಂಶೋಧಕರು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಹೇಳಿದರು.

ಇತ್ತೀಚೆಗೆ ನಿಧನರಾದ ಸಂಶೋಧಕ ಷ. ಶೆಟ್ಟರ್‌ ಮತ್ತು ವೇದವಿದ್ವಾಂಸ ಸುಧಾಕರ ಚತುರ್ವೇದಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವೇದಗಳಲ್ಲಿರುವ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು, ಮನುಷ್ಯಜಾತಿ ಒಂದೇ ಎಂದು ಪ್ರತಿಪಾದಿಸಿ, ವೇದಗಳಲ್ಲಿರುವ ಸಮಾನತೆಯನ್ನು ಪ್ರತಿಪಾದಿಸಿದ ಚತುರ್ವೇದಿ ಅವರು, ಜಾತಿಯನ್ನು ಮೀರಿದ ಮಾನವತಾವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರ’ ಎಂದರು.

ADVERTISEMENT

‘ಭಾವನೆ ಮತ್ತು ಬೌದ್ಧಿಕತೆಗಳ ಸಂಗಮವಾಗಿದ್ದ ಚತುರ್ವೇದಿ ಅವರಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ಮನ್ನಣೆ ಸಿಗಲಿಲ್ಲ’ ಎಂದು ಪತ್ರಕರ್ತ ಎಸ್‌. ಆರ್‌. ರಾಮಸ್ವಾಮಿ ವಿಷಾದಿಸಿದರು.

‘ಚತುರ್ವೇದಿ ಅವರು ಗಾಂಧೀಜಿಯವರ ಪತ್ರ ವ್ಯವಹಾರಗಳಲ್ಲಿ ಸಹಕರಿಸುತ್ತ ‘ಗಾಂಧೀ ಪೋಸ್ಟ್‌ಮ್ಯಾನ್‌’ ಎಂದೇ ಕರೆಸಿಕೊಂಡರು. ವೇದಪ್ರಸಾರಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಿಟ್ಟವರು. ವೇದಗಳಲ್ಲಿರುವ ಜಾತ್ಯತೀತ ತತ್ವವನ್ನೂ ಅಧ್ಯಾತ್ಮವನ್ನೂ ಎತ್ತಿಹಿಡಿದರು. ಎಲ್ಲದಕ್ಕೂ ಮೊದಲು ನಗುವುದನ್ನು ಕಲಿಯಿರಿ – ಎಂದು ಹೇಳುತ್ತ ಜನರಲ್ಲಿ ಜೀವನೋತ್ಸಾಹವನ್ನು ತುಂಬುತ್ತಿದ್ದ ಅವರದ್ದು ಬಿರುಕಿಲ್ಲದ ಬದುಕು’ ಎಂದು ಬಣ್ಣಿಸಿದರು.

ವಿಮರ್ಶಕಿ ಎಂ. ಎಸ್‌. ಆಶಾದೇವಿ, ‘ಸಾವನ್ನು ಘನತೆಯಿಂದ ಮತ್ತು ಪ್ರೀತಿಯಿಂದ ಒಪ್ಪುವುದು ಬದುಕಿಗೆ ಸಲ್ಲಿಸುವ ಗೌರವ’ ಎಂದು ಸಾವನ್ನು ಕುರಿತ ತಮ್ಮ ಎರಡು ಕೃತಿಗಳ ಮೂಲಕ ನಿರೂಪಿಸಿದ ಶೆಟ್ಟರ್‌ ಅವರು, ನಿಜವಾದ ಸಂಶೋಧಕ ಜನರಲ್ಲಿ ಪ್ರಚೋದನೆಯನ್ನು ಉಂಟುಮಾಡಬೇಕು ಎಂಬ ತತ್ವವನ್ನು ಪಾಲಿಸಿದರು’ ಎಂದರು.

ಲೇಖಕಿ ಜಯಂತಿ ಮನೋಹರ್‌ ಮಾತನಾಡಿ, ‘ಹತ್ತಾರು ಅಂತರ್ಜಾತೀಯ ಮದುವೆಗಳನ್ನು ನೆರವೇರಿಸಿದ ಚತುರ್ವೇದಿ ಅವರು ಎಂದಿಗೂ ಸಾವಿನ ಬಗ್ಗೆ ಯೋಚಿಸಿದವರಲ್ಲ’ ಎಂದು ಸ್ಮರಿಸಿಕೊಂಡರು.

ಪ್ರಕಾಶಕ ನ. ರವಿಕುಮಾರ್‌ ಹಾಗೂ ಲೇಖಕ ರಾಜಕುಮಾರ್‌ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.