ADVERTISEMENT

ಬೆಂಗಳೂರು: ಉಪನಗರ ರೈಲು ನಿಲ್ದಾಣಗಳ ಸ್ಥಳ ಬದಲಾವಣೆ

ಬಹುಮಾದರಿ ಸಾರಿಗೆಗೆ ಹತ್ತಿರವಾಗಿ ಬಿಎಸ್‌ಆರ್‌ಪಿ ನಿಲ್ದಾಣ ನಿರ್ಮಿಸಲು ನಿರ್ಧಾರ

ಬಾಲಕೃಷ್ಣ ಪಿ.ಎಚ್‌
Published 16 ಸೆಪ್ಟೆಂಬರ್ 2023, 23:30 IST
Last Updated 16 ಸೆಪ್ಟೆಂಬರ್ 2023, 23:30 IST
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೈರುತ್ಯ ರೈಲು ನಿಲ್ದಾಣ ಬಳಿ ನಿರ್ಮಾಣವಾಗಬೇಕಿದ್ದ ಉಪನಗರ ರೈಲು ನಿಲ್ದಾಣವನ್ನು ಬಸ್‌ನಿಲ್ದಾಣ, ಮೆಟ್ರೊ ನಿಲ್ದಾಣಕ್ಕೆ ಸಮೀಪವಾಗುವಂತೆ ಯೋಜನೆ ಬದಲಿಸಲಾಗಿದೆ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೈರುತ್ಯ ರೈಲು ನಿಲ್ದಾಣ ಬಳಿ ನಿರ್ಮಾಣವಾಗಬೇಕಿದ್ದ ಉಪನಗರ ರೈಲು ನಿಲ್ದಾಣವನ್ನು ಬಸ್‌ನಿಲ್ದಾಣ, ಮೆಟ್ರೊ ನಿಲ್ದಾಣಕ್ಕೆ ಸಮೀಪವಾಗುವಂತೆ ಯೋಜನೆ ಬದಲಿಸಲಾಗಿದೆ   

ಬೆಂಗಳೂರು: ಬಹುಮಾದರಿ ಸಾರಿಗೆಗೆ ಉಪನಗರ ರೈಲು ನಿಲ್ದಾಣಗಳು ಹತ್ತಿರ ಇರಬೇಕು ಎಂಬ ಕಾರಣಕ್ಕೆ ಮೂಲ ನಕ್ಷೆ ಬದಲಾಯಿಸಿ ಕೆಲವು ನಿಲ್ದಾಣಗಳನ್ನು ಬೇರೆಡೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಬಳಿ ನಿರ್ಮಿಸಬೇಕಿದ್ದ ಬಿಎಸ್‌ಆರ್‌ಪಿ ನಿಲ್ದಾಣವೂ ಈ ಬದಲಾವಣೆ ಯೋಜನೆಯಲ್ಲಿದೆ.

ಬೆಂಗಳೂರು ಉಪನಗರ ರೈಲ್ವೆ ಯೋಜನೆಯು (ಬಿಎಸ್‌ಆರ್‌ಪಿ) ರೈಲ್ವೆ ಇಲಾಖೆ  ಮಂಜೂರು ಮಾಡಿರುವ ದೇಶದ ಮೊದಲ ಉಪನಗರ ಯೋಜನೆ. ಇದನ್ನು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆ–ರೈಡ್‌) ಜಾರಿಗೆ ತರುತ್ತಿದೆ.  ಬೈಯಪ್ಪನಹಳ್ಳಿ–ಚಿಕ್ಕಬಾಣಾವರ ಕಾಮಗಾರಿಯನ್ನು (ಕಾರಿಡಾರ್‌–2) ಎಲ್‌ ಆ್ಯಂಡ್‌ ಟಿ ಸಂಸ್ಥೆಯು ನಡೆಸುತ್ತಿದೆ.

ADVERTISEMENT

ಬೆನ್ನಿಗಾನಹಳ್ಳಿ, ಕಸ್ತೂರಿ ನಗರ, ಸೇವಾ ನಗರ, ಬಾಣಸವಾಡಿ, ನಾಗವಾರ, ಕನಕನಗರ, ಹೆಬ್ಬಾಳ, ಮತ್ತಿಕೆರೆ, ಯಶವಂತಪುರ, ಶೆಟ್ಟಿಹಳ್ಳಿ, ಮೈದರಹಳ್ಳಿ, ಚಿಕ್ಕಬಾಣಾವರ ಸೇರಿ ಒಟ್ಟು 12 ನಿಲ್ದಾಣಗಳ ವಿನ್ಯಾಸ ಅಂತಿಮಗೊಂಡಿದೆ. ಎರಡು ಎತ್ತರಿಸಿದ ನಿಲ್ದಾಣಗಳು, ಎರಡು ಎತ್ತರಿಸಿದ ಅಂತರ್‌ಬದಲಾವಣೆಯ ನಿಲ್ದಾಣಗಳು, ಎಂಟು ನೆಲಸ್ತರದ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.

ಯಶವಂತಪುರ ನಿಲ್ದಾಣವು ಆರ್‌ಟಿಒ ರಸ್ತೆ ಕಡೆಗೆ ನಿರ್ಮಾಣವಾಗಬೇಕಿತ್ತು. ಮೆಟ್ರೊ ನಿಲ್ದಾಣ ಮತ್ತು ನೈರುತ್ಯ ರೈಲ್ವೆ ನಿಲ್ದಾಣಕ್ಕೆ ಹತ್ತಿರವಾಗಲಿ ಎಂಬ ಕಾರಣಕ್ಕೆ ಹೆದ್ದಾರಿ ಬಳಿ ನಿಲ್ದಾಣ ನಿರ್ಮಾಣಗೊಳ್ಳಲಿದೆ. ಹೆಬ್ಬಾಳದಲ್ಲಿ ರೈಲು ನಿಲ್ದಾಣವು ಬಸ್‌ ನಿಲ್ದಾಣಕ್ಕಿಂತ ದೂರದಲ್ಲಿದೆ. ಅಲ್ಲೇ ಉಪನಗರ ರೈಲು ನಿಲ್ದಾಣವನ್ನೂ ನಿರ್ಮಿಸುವುದು ಮೂಲ ಯೋಜನೆಯಾಗಿತ್ತು. ಈಗ ಅದನ್ನು ಬದಲಾಯಿಸಿ ಬಸ್‌ ನಿಲ್ದಾಣಕ್ಕೆ ಸಮೀಪವಾಗುವಂತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಚಿಕ್ಕಬಾಣಾವರದಲ್ಲಿ ನಿಲ್ದಾಣವನ್ನು ರಸ್ತೆಯ ಇನ್ನೊಂದು ಬದಿಗೆ ಸ್ಥಳಾಂತರಿಸಿ ನಿರ್ಮಿಸಲಾಗುತ್ತಿದೆ.

‘ಬಿಎಂಟಿಸಿ, ಮೆಟ್ರೊ, ನೈರುತ್ಯ ರೈಲ್ವೆ, ವಿಮಾನ ನಿಲ್ದಾಣ ಹೀಗೆ ಇತರ ಸಾರಿಗೆಗಳಿಗೆ ಉಪನಗರ ರೈಲು ಪೂರಕವಾಗಿ ಇರಬೇಕು. ಮಲ್ಟಿ ಮೋಡೆಲ್‌ ಟ್ರಾನ್ಸಿಟ್‌ (ಬಹು ಮಾದರಿ ಸಾರಿಗೆ) ಎಂದು ಈ ವ್ಯವಸ್ಥೆಯನ್ನು ಕರೆಯಲಾಗುತ್ತದೆ. ನೀಲನಕ್ಷೆ ಆರಂಭದಲ್ಲಿ ತಯಾರಿಸಲಾಗುತ್ತದೆ. ಬಳಿಕ ಸಾಧಕ ಬಾಧಕ ನೋಡಿ ಕೆಲವು ಕಡೆ ಬದಲಾವಣೆ ಮಾಡಲು, ಪರಿಷ್ಕರಿಸಲು ಅವಕಾಶ ಇರುತ್ತದೆ. ಅದರಂತೆ ಕೆಲವು ನಿಲ್ದಾಣಗಳ ಸ್ಥಳಗಳನ್ನು ಬದಲಾಯಿಸಲಾಗಿದೆ’ ಎಂದು ಕೆ–ರೈಡ್‌ ಅಧಿಕಾರಿಗಳು ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ರಾಜಕುಮಾರ್ ದುಗರ್

ಮೆಜೆಸ್ಟಿಕ್‌ನಲ್ಲಿ ಬದಲಾವಣೆ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಬಳಿ ಉಪನಗರ ರೈಲು ಯೋಜನೆಯ ಕಾರಿಡಾರ್‌–1 (ಬೆಂಗಳೂರು ನಗರ–ದೇವನಹಳ್ಳಿ) ಮತ್ತು ಕಾರಿಡಾರ್‌–3 (ಕೆಂಗೇರಿ–ವೈಟ್‌ ಫೀಲ್ಡ್‌) ಮಾರ್ಗಗಳು ಸಂಪರ್ಕಿಸುತ್ತವೆ. ಕೆಎಸ್‌ಆರ್‌ ರೈಲು ನಿಲ್ದಾಣದ ಬಳಿಯೇ ಉಪನಗರ ರೈಲು ನಿಲ್ದಾಣವೂ ನಿರ್ಮಾಣವಾಗಬೇಕಿತ್ತು. ಆದರೆ ಮೆಟ್ರೊ ಕೆಎಸ್‌ಆರ್‌ಟಿಸಿ ಬಿಎಂಟಿಸಿ ಪ್ರಯಾಣಿಕರಿಗೂ ಹತ್ತಿರವಾಗಬೇಕು ಎಂಬ ಕಾರಣಕ್ಕೆ ಮೆಟ್ರೊ ಮತ್ತು ಬಸ್‌ ನಿಲ್ದಾಣಗಳ ನಡುವೆ ಉಪನಗರ ರೈಲು ನಿಲ್ದಾಣ ನಿರ್ಮಿಸಲು ಯೋಜನೆ ತಯಾರಾಗುತ್ತಿದೆ. ಕಾರಿಡಾರ್‌–1 ಮತ್ತು 4 ಸಂಪರ್ಕಿಸುವ ಮಾರ್ಗದಲ್ಲಿ ಯಲಹಂಕ ನಿಲ್ದಾಣವನ್ನು ಕೂಡ ಬಸ್‌ ನಿಲ್ದಾಣ ಬಳಿಗೆ ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಬಿಎಸ್‌ಆರ್‌ಪಿ ಅಧಿಕಾರಿಗಳು ತಿಳಿಸಿದ್ದಾರೆ.

‘ಉತ್ತಮ ಬೆಳವಣಿಗೆ’

‘ಬೆಂಗಳೂರು ಉಪನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಕೆ–ರೈಡ್‌ ಕೆಲ ಬದಲಾವಣೆ ಮಾಡಿರುವುದು ಉತ್ತಮ ಬೆಳವಣಿಗೆ. ಒಂದು ಸಾರಿಗೆ ಮತ್ತು ಇನ್ನೊಂದು ಸಾರಿಗೆ ವ್ಯವಸ್ಥೆಗಳು ಒಂದಕ್ಕೊಂದು ಪೂರಕವಾಗಿ ಇದ್ದಾಗ ನಗರಕ್ಕೂ ಪ್ರಯಾಣಿಕರಿಗೂ ಉಪಯೋಗವಾಗುತ್ತದೆ. ಮೆಟ್ರೊ ನಿಲ್ದಾಣಗಳನ್ನು ಮಾಡುವಾಗ ಕೂಡ ಇದೇ ನಿಯಮ ಅಳವಡಿಸಿಕೊಳ್ಳಬೇಕಿತ್ತು. ಆದರೆ ಅವರು ಬಹಳ ಕಡೆಗಳಲ್ಲಿ ಬಸ್‌ ನಿಲ್ದಾಣಕ್ಕಿಂತ ಒಂದು ಕಿಲೋಮೀಟರ್‌ನಷ್ಟು ದೂರದಲ್ಲಿ ನಿಲ್ದಾಣ ಮಾಡಿದ್ದಾರೆ. ಬಿಎಸ್‌ಆರ್‌ಪಿ ಆ ರೀತಿ ಆಗದಂತೆ ಈಗ ಯೋಜನೆ ರೂಪಿಸಿರುವುದು ಒಳ್ಳೆಯ ನಿರ್ಧಾರ’ ಎಂದು ಸಿಟಿಜನ್ಸ್‌ ಫಾರ್‌ ಸಿಟಿಜನ್‌ ಸಂಸ್ಥಾಪಕ ರಾಜಕುಮಾರ್ ದುಗರ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.