ADVERTISEMENT

ಶಿವಾಜಿನಗರ: ಮತ್ತೆ 15 ಜನರಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 18 ಮೇ 2020, 4:11 IST
Last Updated 18 ಮೇ 2020, 4:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಶಿವಾಜಿನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದೇ ಸಮನೆ ಹೆಚ್ಚಳವಾಗುತ್ತಿದ್ದು, ಭಾನುವಾರ ಒಂದೇ ದಿನ 15 ಮಂದಿಗೆ ಸೋಂಕು ತಗುಲಿದೆ.

ಶಿವಾಜಿನಗರದಲ್ಲಿ ಒಂದೇ ವ್ಯಕ್ತಿಯಿಂದ ಹಲವರಿಗೆ ಸೋಂಕು ಹರಡುತ್ತಿದ್ದು, 48 ಗಂಟೆಗಳಲ್ಲಿ 29 ಮಂದಿ ಸೋಂಕಿತರಾಗಿದ್ದಾರೆ.ರಿಜೆಂಟಾ‌ ಪ್ಲೇಸ್ ಹೋಟೆಲ್‌ನ ಸ್ವಚ್ಛತಾ ಸಿಬ್ಬಂದಿಯ (ರೋಗಿ 653) ಸಂಪರ್ಕದಿಂದ ಕ್ವಾರಂಟೈನ್‌ಗೆ ಒಳಗಾದವರಿಗೆ ಸೋಂಕುಇರುವುದು ದೃಢಪಟ್ಟಿದೆ. ಹೊಸದಾಗಿ ಸೋಂಕಿತರಾದವರು ಚಾಂದಿನಿ ಚೌಕ್‌ನಕಟ್ಟಡದಲ್ಲಿ ವಾಸವಿದ್ದವರೇ ಆಗಿದ್ದಾರೆ. ಹೋಟೆಲ್ ಸಿಬ್ಬಂದಿಗೆ ಸೋಂಕು ತಗುಲಿದ ಬಳಿಕವೇ ಅವರು ವಾಸವಿದ್ದ ಕಟ್ಟಡಕ್ಕೆ ಬೀಗ ಹಾಕಿ, ಅಲ್ಲಿನ 73ನಿವಾಸಿಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಹೋಟೆಲ್‌ನ ಕೆಲ ಸಿಬ್ಬಂದಿಯನ್ನೂ ಸಂಪರ್ಕಿತರು ಎಂದು ಗುರುತಿಸಲಾಗಿತ್ತು. ಇದರಿಂದಾಗಿ 653ನೇ ರೋಗಿಯ ಸಂಪರ್ಕದಿಂದ 105 ಮಂದಿ ನಿಗಾ ವ್ಯವಸ್ಥೆಗೆ ಒಳಪಟ್ಟಿದ್ದಾರೆ.

653ನೇ ರೋಗಿಯೂ ಒಳಗೊಂಡಂತೆ ಶಿವಾಜಿನಗರದಲ್ಲಿ ಈವರೆಗೆ 45 ಪ್ರಕರಣಗಳು ವರದಿಯಾದಂತಾಗಿದೆ. ನಗರದಲ್ಲಿ ಪಾದರಾಯನಪುರದಲ್ಲಿ 54 ಪ್ರಕರಣಗಳು ಬೆಳಕಿಗೆ ಬಂದಿದ್ದು, ಅತೀ ಹೆಚ್ಚು ಮಂದಿ ಅಲ್ಲಿ ಸೋಂಕಿತರಾಗಿದ್ದಾರೆ. ಹೊಂಗಸಂದ್ರದಲ್ಲಿ 36 ಪ್ರಕರಣಗಳು ವರದಿಯಾಗಿವೆ.

ADVERTISEMENT

231ಕ್ಕೆ ಏರಿಕೆ: ನಗರದಲ್ಲಿ ಸೋಂಕಿತರ ಸಂಖ್ಯೆ 231ಕ್ಕೆ ಏರಿಕೆಯಾಗಿದೆ. ಇದರಲ್ಲಿ ಶೇ 50ಕ್ಕೂ ಅಧಿಕ ಪ್ರಕರಣಗಳು ಪಾದರಾಯನಪುರ, ಶಿವಾಜಿನಗರ ಹಾಗೂ ಹೊಂಗಸಂದ್ರದಲ್ಲಿಯೇ ವರದಿಯಾಗಿವೆ. ಈವರೆಗೆ 122 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. 101 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

31ರವರೆಗೆ ಮೆಟ್ರೊ ಸ್ಥಗಿತ

ಕೇಂದ್ರ ಸರ್ಕಾರ ಲಾಕ್‌ಡೌನ್‌ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ, ಅಲ್ಲಿಯವರೆಗೂ ಮೆಟ್ರೊ ರೈಲು ಸಂಚಾರ ಇರುವುದಿಲ್ಲ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಹೇಳಿದೆ.

‘ಕೇಂದ್ರ ಗೃಹ ಸಚಿವಾಲಯದ ಆದೇಶದಂತೆ ಮೇ 31ರವರೆಗೆ ಮೆಟ್ರೊ ರೈಲು ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ‘ಪ್ರಜಾವಾಣಿ’ಗೆ ತಿಳಿಸಿದರು.

ರೈಲುಗಳನ್ನು ಸುಸ್ಥಿತಿಯಲ್ಲಿ ಮತ್ತು ಪವರ್‌ ಮೋಡ್‌ನಲ್ಲಿ ಇರಿಸುವ ಉದ್ದೇಶದಿಂದ ಒಂದು ಪರೀಕ್ಷಾರ್ಥ ರೈಲು ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. ಮೆಟ್ರೊ ನಿಲ್ದಾಣಗಳ ಬಳಿಯ ವಾಹನ ನಿಲುಗಡೆ ಸ್ಥಳಗಳು ಮತ್ತು ನಿಲ್ದಾಣದೊಳಗಿನ ವಾಣಿಜ್ಯ ಮಳಿಗೆಗಳನ್ನು ಸಂಪೂರ್ಣವಾಗಿ
ಮುಚ್ಚಲಾಗುತ್ತದೆ ಎಂದೂ ಅದು ತಿಳಿಸಿದೆ.

‘ಬಿಎಂಟಿಸಿ: ಇಂದು ನಿರ್ಧಾರ’

‘ಕೇಂದ್ರ ಸರ್ಕಾರ ಈಗ ಹೊರಡಿಸಿರುವ ಲಾಕ್‌ಡೌನ್‌ ಮಾರ್ಗಸೂಚಿಗಳಲ್ಲಿ, ಬಸ್‌ಗಳು ನಿರ್ಬಂಧಿತ ಪಟ್ಟಿಯಲ್ಲಿ ಇಲ್ಲ. ರಾಜ್ಯ ಸರ್ಕಾರವೇ ಈ ಕುರಿತು ತೀರ್ಮಾನ ಕೈಗೊಳ್ಳಬೇಕು. ಈಗಾಗಲೇ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ಮೇ 19ರವರೆಗೆ ಬಸ್‌ ಸಂಚಾರ ಬೇಡ ಎಂದಿದ್ದಾರೆ. ಆದರೆ, ಸೋಮವಾರ (ಮೇ 18) ಈ ಕುರಿತು ಸಭೆ ನಡೆಯಲಿದ್ದು, ಅಂತಿಮ ತೀರ್ಮಾನ ಹೊರಬೀಳಲಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋಮವಾರ ನಡೆಯುವ ಸಭೆಯಲ್ಲಿ ಮೇ 19ರಿಂದಲೇ ಬಸ್‌ ಸಂಚಾರ ಆರಂಭಿಸಲು ಅನುಮತಿ ಸಿಗಬಹುದು ಅಥವಾ ಸಂಚಾರ ನಿರ್ಬಂಧ ಮುಂದುವರಿಯಲೂಬಹುದು. ಮುಂದಿನ ಆದೇಶವನ್ನು ನಾವು ಕಾಯುತ್ತಿದ್ದೇವೆ. ಅನುಮತಿ ಸಿಗುತ್ತಿದ್ದಂತೆ ಸೇವೆ ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.

‘ಸದ್ಯಕ್ಕೆ ರಸ್ತೆಗಿಳಿಯಲ್ಲ ಖಾಸಗಿ ಬಸ್’

ಕೊರೊನಾದಿಂದ ನಲುಗಿರುವ ಖಾಸಗಿ ಸಾರಿಗೆ ಉದ್ಯಮದ ಚೇತರಿಕೆಗೆ ಕನಿಷ್ಠ ಆರು ತಿಂಗಳವರೆಗೆ ತೆರಿಗೆ ವಿನಾಯಿತಿ ನೀಡಬೇಕು. ಅಲ್ಲಿಯವರೆಗೆ ಖಾಸಗಿ ಬಸ್‍ಗಳು ರಸ್ತೆಗಿಳಿಸುವುದಿಲ್ಲ ಎಂದು ಖಾಸಗಿ ಬಸ್ ಮಾಲೀಕರ ಸಂಘಗಳು ಪಟ್ಟು ಹಿಡಿದಿವೆ.

‘ಬೇಸಿಗೆ, ಖಾಸಗಿ ಬಸ್‍ಗಳಿಗೆ ಲಾಭದ ಅವಧಿ. ಆದರೆ, ಕೊರೊನಾ ಹೊಡೆತದಿಂದ ಉದ್ಯಮ ನಷ್ಟಕ್ಕೆ ಸಿಲುಕಿದೆ. ಸರ್ಕಾರದಿಂದ ನೆರವಿನ ನಿರೀಕ್ಷೆಯಲ್ಲಿದ್ದ ಮಾಲೀಕರಿಗೆ ಹಿನ್ನಡೆಯಾಗಿದೆ. ಖಾಸಗಿ ಬಸ್‍ಗಳಿಗೆ ಆರು ತಿಂಗಳವರೆಗೆ ತೆರಿಗೆ ವಿನಾಯಿತಿ ಹಾಗೂ ಮುಂದಿನ ಆರು ತಿಂಗಳವರೆಗೆ ಶೇ 50ರಷ್ಟು ತೆರಿಗೆ ವಿನಾಯಿತಿ ನೀಡುವವರೆಗೆ ಬಸ್ ಸೇವೆ ಆರಂಭಿಸುವುದಿಲ್ಲ’ ಎಂದು ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಎಸ್.ನಟರಾಜ ಶರ್ಮಾ ತಿಳಿಸಿದರು.

ಮುಂಗಡ ತೆರಿಗೆ ಪಾವತಿಯನ್ನು 15ರಿಂದ 30 ದಿನಗಳಿಗೆ ಹೆಚ್ಚಿಸಬೇಕು. ಅಂತರರಾಜ್ಯ ಪ್ರವಾಸಿ ವಾಹನಗಳ ಸಂಚಾರಕ್ಕೆ ಸರ್ಕಾರ ಒಪ್ಪಿಗೆ ನೀಡಬೇಕು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯದ ಎಲ್ಲ ಖಾಸಗಿ ಬಸ್ ಮಾಲೀಕರ ಪರವಾಗಿ ಸಾರಿಗೆ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಲಾಗುವುದು’ ಎಂದರು.

‘ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗುವಂತೆ ಖಾಸಗಿ ಬಸ್ ಸೇವೆ ಆರಂಭಿಸಲು ಈವರೆಗೆ ಅನುಮತಿ ಸಿಕ್ಕಿಲ್ಲ. ಅಂತರ ಜಿಲ್ಲಾ ಬಸ್ ಸಂಚಾರಕ್ಕೆ ಸರ್ಕಾರ ಅವಕಾಶ ನೀಡುವವರೆಗೆ ಖಾಸಗಿ ಬಸ್‍ಗಳ ಸಂಚಾರ ಅನುಮಾನ’ ಎಂದು ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸದಾನಂದ ಚಾತ್ರಾ ತಿಳಿಸಿದರು.

‘ಹಸಿರು ವಲಯಕ್ಕೆ ಸೇರಿರುವ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಖಾಸಗಿ ಬಸ್ ಸಂಚಾರ ಇಲ್ಲ.
ಜಿಲ್ಲೆಗಳ ನಡುವೆ ಸೇವೆ ಆರಂಭವಾದಾಗ ಮಾತ್ರ ಲಾಕ್‌ಡೌನ್ ನಷ್ಟ ಭರಿಸಲು ಸಾಧ್ಯ. ಈ ಹಿನ್ನೆಲೆ ಸರ್ಕಾರದಿಂದ ಪೂರ್ಣ ಅನುಮತಿ ಸಿಗುವವರೆಗೂ ಬಸ್ ಸೇವೆ ಆರಂಭಿಸುವುದು ಬೇಡವೆಂದು ನಿರ್ಧರಿಸಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.