ADVERTISEMENT

ಕಾವಿ ಬಟ್ಟೆಗೆ ಘನತೆ ತಂದ ಶಿವಕುಮಾರ ಸ್ವಾಮೀಜಿ: ಆರೂಢಭಾರತೀ ಸ್ವಾಮೀಜಿ

ಆರೂಢಭಾರತೀ ಸ್ವಾಮೀಜಿ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 21:44 IST
Last Updated 22 ಜನವರಿ 2023, 21:44 IST
ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಆರೂಢಭಾರತೀ ಸ್ವಾಮೀಜಿ ಮಾತನಾಡಿದರು.
ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಆರೂಢಭಾರತೀ ಸ್ವಾಮೀಜಿ ಮಾತನಾಡಿದರು.   

ಬೆಂಗಳೂರು: ‘ಕನ್ನಡ ನೆಲಕ್ಕೆ ಮತ್ತು ಕಾವಿ ಬಟ್ಟೆಗೆ ಘನತೆ ಹಾಗೂ ಗೌರವ ತಂದು ಕೊಟ್ಟ ಶ್ರೇಯಸ್ಸು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಸಲ್ಲಲಿದೆ’ ಎಂದು ರಾಮೋಹಳ್ಳಿಯ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಆರೂಢಭಾರತೀ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಡೆದಾಡುವ ದೇವರ ಸೇವಾ ಟ್ರಸ್ಟ ನಗರದಲ್ಲಿ ಆಯೋಜಿಸಿದ ಶಿವಕುಮಾರ ಸ್ವಾಮೀಜಿ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ, ಮಾತನಾಡಿದರು.

‘ಶಿವಕುಮಾರ ಸ್ವಾಮೀಜಿ ಅವರು ಅನಂತ ನೋವುಗಳನ್ನುಂಡು, ಸಿದ್ದಗಂಗಾ ಮಠವನ್ನು ಬೆಳೆಸಿದರು. ಮಠದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಪಸರಿಸಿದರು. ಪ್ರತಿ ನಿತ್ಯ ಹತ್ತಾರು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯ, ಅನ್ನ ಹಾಗೂ ವಿದ್ಯೆಯನ್ನು ನೀಡಿದರು. ತಮ್ಮ ಈ ಕಾರ್ಯದಿಂದ ಲಕ್ಷಾಂತರ ಜನರ ಬಾಳನ್ನು ಬೆಳಗಿದರು’ ಎಂದು ಹೇಳಿದರು.

ADVERTISEMENT

‘ತ್ಯಾಗ ಸೇವೆ ಮಾಡುವ ವ್ಯಕ್ತಿ ಹೆಚ್ಚು ದೊಡ್ಡವನಾಗುತ್ತಾನೆ ಎಂಬುದಕ್ಕೆ ಮಾನವ ಮಹಾದೇವನಾಗಿ ಮೆರೆದ ಶಿವಕುಮಾರ ಸ್ವಾಮೀಜಿ ಶ್ರೇಷ್ಠ ನಿದರ್ಶನ. ಬಸವಣ್ಣನ ನಂತರ ಈ ನಾಡು ಕಂಡ ಮಹಾನ್ ಕಾಯಕಯೋಗಿ ಅವರಾಗಿದ್ದರು. ಅವರ ಆಚಾರ ವಿಚಾರಗಳನ್ನು ನಾವೆಲ್ಲ ಮೈಗೂಡಿಸಿಕೊಳ್ಳಬೇಕು’ ಎಂದರು.

ವಿವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25 ಸಾಧಕರಿಗೆ ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ‘ಕಾಯಕರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಡೆದಾಡುವ ದೇವರ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಎಸ್. ಮಂಜುನಾಥ್, ಗೌರವಾಧ್ಯಕ್ಷೆ ಗೌರಮ್ಮ, ಅಧ್ಯಕ್ಷ ಜಿ.ಕೆ. ಶಂಕರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.