ADVERTISEMENT

ಶಿವಮೊಗ್ಗ : ಆಗಸ್ಟ್‌ 11ರಿಂದ ವಿಮಾನ ಹಾರಾಟ

​ಪ್ರಜಾವಾಣಿ ವಾರ್ತೆ
Published 13 ಜುಲೈ 2023, 16:16 IST
Last Updated 13 ಜುಲೈ 2023, 16:16 IST
ಶಿವಮೊಗ್ಗ  ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)
ಶಿವಮೊಗ್ಗ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)   

ಬೆಂಗಳೂರು: ‘ಶಿವಮೊಗ್ಗ ವಿಮಾನ ನಿಲ್ದಾಣ ಆಗಸ್ಟ್ 11ರಿಂದ ಕಾರ್ಯಾಚರಣೆಗೊಳ್ಳುವ ಸಾಧ್ಯತೆ ಇದೆ. ಅದಕ್ಕೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಜುಲೈ 20ರೊಳಗೆ ಮಾಡಿಕೊಳ್ಳಲಾಗುವುದು’ ಎಂದು ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ರಾಜ್ಯದ ಹೊಸ ವಿಮಾನ ನಿಲ್ದಾಣಗಳ ಕಾಮಗಾರಿಗಳ ಬಗ್ಗೆ ಗುರುವಾರ ನಡೆದ ಪ್ರಗತಿ ‍ಪ‍ರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಂಬುಲೆನ್ಸ್ ಮತ್ತು ಇತರೆ ಅಗತ್ಯ ವಾಹನಗಳನ್ನು ನಿಯೋಜಿಸುವ ಕಾರ್ಯವಾಗಬೇಕು. ಜತೆಗೆ, ಕೆಲವು ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿ ನೇಮಕ ನಡೆಯಬೇಕಿದೆ. ಇವೆಲ್ಲವನ್ನೂ ಜುಲೈ 20ರ ಹೊತ್ತಿಗೆ ಪೂರೈಸಿ ವಿಮಾನ ನಿಲ್ದಾಣವನ್ನು ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗುವುದು’ ಎಂದು ವಿವರಿಸಿದರು.

‘ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಇಲ್ಲಿನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಎಸ್ಐಐಡಿಸಿ) ವಹಿಸಿದೆ. ಇದರೊಂದಿಗೆ ಶಿವಮೊಗ್ಗ ನಿಲ್ದಾಣವು ರಾಜ್ಯ ಸರ್ಕಾರದ ಸಂಸ್ಥೆಯ ವತಿಯಿಂದ ನಡೆಯಲಿರುವ ಕರ್ನಾಟಕದ ಮೊದಲ ವಿಮಾನ ನಿಲ್ದಾಣವಾಗಲಿದೆ’ ಎಂದರು.

ADVERTISEMENT

‘ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 20 ವಿಮಾನಗಳು ಬಂದಿಳಿದಿವೆ. ಇದರಿಂದಾಗಿ ₹12 ಲಕ್ಷ ಆದಾಯ ಬಂದಿದೆ’ ಎಂದು ತಿಳಿಸಿದರು.

‘ನಿರ್ಮಾಣ ಹಂತದ ವಿಜಯಪುರ ವಿಮಾನ ನಿಲ್ದಾಣದಲ್ಲಿ ರಾತ್ರಿ ಲ್ಯಾಂಡಿಂಗ್ ವ್ಯವಸ್ಥೆ ಸೌಲಭ್ಯ ಕಲ್ಪಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಈ ನಿಲ್ದಾಣದ ಮೂಲಯೋಜನೆಯಲ್ಲಿ ರಾತ್ರಿ ಲ್ಯಾಂಡಿಂಗ್ ಸೌಲಭ್ಯ ಸೇರಿರಲಿಲ್ಲ. ಈ ಸೌಲಭ್ಯಕ್ಕೆ ವ್ಯವಸ್ಥೆ ಮಾಡಲು ₹12 ಕೋಟಿ ಹೆಚ್ಚುವರಿಯಾಗಿ ಬೇಕಾಗುತ್ತದೆ. ಇದುವರೆಗೆ ಸುಮಾರು ₹350 ಕೋಟಿ ಖರ್ಚಾಗಿದೆ. ರನ್ ವೇ ಪೂರ್ಣಗೊಂಡಿದ್ದು, ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಕೆಲಸಗಳೆಲ್ಲ ಮೂರು ತಿಂಗಳಲ್ಲಿ ಮುಗಿಯಲಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.