ಹೆಸರಘಟ್ಟ: ಶಿವರಾಮಕಾರಂತ ಬಡಾವಣೆ ಬಗ್ಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನಿಯೋಜಿಸಿರುವ ಸಮಿತಿಯ ಸದಸ್ಯ ಜೈಕರ್ ಜೆರೋಮ್ ಅವರು ಚಿಕ್ಕಬಾಣಾವರ ಗ್ರಾಮದ ಮಾರುತಿನಗರ, ಕೆಂಪಾಪುರ, ಗಾಣಿಗರಹಳ್ಳಿ ಗ್ರಾಮಗಳಿಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಗ್ರಾಮಸ್ಥರ ಅಳಲುಗಳನ್ನು ಆಲಿಸಿದರು.
’17 ದಾಖಲೆಗಳನ್ನು ಕೊಡುವಂತೆ ನೋಟಿಸ್ ನೀಡಿದ್ದೀರಿ. ಆದರೆ, ಅಷ್ಟೊಂದು ದಾಖಲೆಗಳು ನಮ್ಮ ಬಳಿ ಇಲ್ಲ. ಏನು ಮಾಡುವುದು?‘ ಎಂದು ಗಾಣಿಗರಹಳ್ಳಿ ಗ್ರಾಮದ ಹನುಮಂತರಾಯಪ್ಪ ಲೇಔಟ್‍ನ ನಿವಾಸಿಗಳು ಪ್ರಶ್ನಿಸಿದರು. ’ಹದಿನೇಳು ದಾಖಲೆಗಳಲ್ಲಿ ಒಂದನ್ನು ಮಾತ್ರ ನೀಡಿ. ಈ ಬಗ್ಗೆ ಪ್ರಕಟಣೆ ಹೊರಡಿಸುತ್ತೇನೆ‘ ಎಂದು ಜೈಕರ್ ಜೆರೋಮ್ ತಿಳಿಸಿದರು.
’17 ಹಳ್ಳಿಗಳ ಪ್ರಮುಖರನ್ನು ಒಂದು ಕಡೆ ಸಭೆ ಕರೆದು ನಮ್ಮ ಕಷ್ಟಗಳನ್ನು ಆಲಿಸಿ. ಸಾಲ ಮಾಡಿ ಮನೆಗಳನ್ನು ಕಟ್ಟಿಕೊಂಡಿದ್ದೇವೆ. ಇನ್ನೂ ಸಾಲ ತೀರಿಲ್ಲ. ಮನೆ ಕೆಡವಿ ಬಿಟ್ಟರೆ ನಾವು ಅತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ‘ ಎಂದು ಗುಣಿಅಗ್ರಹಾರ ಗ್ರಾಮದ ನಿವಾಸಿ ಕೃಷ್ಣಪ್ಪ ಅಳಲು ತೋಡಿಕೊಂಡರು.
ತಕ್ಷಣ ಸ್ಪಂದಿಸಿದ ಜೈಕರ್ ಜೆರೋಮ್, ’ನೀವೆಲ್ಲ ಯುಗಾದಿ ಹಬ್ಬ ಕಳೆದ ಕೂಡಲೇ ಒಂದು ಸ್ಥಳವನ್ನು ನಿಗದಿ ಮಾಡಿ. ಯಾರು ಬರಬೇಕು ಎಂದು ನೀವೇ ನಿರ್ಧಾರ ಮಾಡಿ. ಎಲ್ಲರೂ ಸೇರಿ ಕುಳಿತು ಮಾತನಾಡೋಣ. ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡೋಣ" ಎಂದರು.
’ನನ್ನ ಗಂಡ ಸೈನಿಕರಾಗಿದ್ದರು. ಈಗ ಅವರು ಇಲ್ಲ. ಅವರಿಗೆ ಕೊಟ್ಟ ಹಣದಲ್ಲಿ ಮನೆಯನ್ನು ಕಟ್ಟಿದ್ದೇವೆ. ಮುಂದೆ ಏನು ಮಾಡಬೇಕು ಎಂಬುದನ್ನು ನೀವೇ ಹೇಳಿ‘ ಎಂದು ಸೈನಿಕನ ಪತ್ನಿಯೊಬ್ಬರು ಕಣ್ಣೀರು ಇಟ್ಟರು.
’ನಿವೇಶನಗಳ ಬಗ್ಗೆ ಏಪ್ರಿಲ್ 30ರ ತನಕ ಏನೂ ಹೇಳಲು ಬರುವುದಿಲ್ಲ. ನೀವೆಲ್ಲ ಸರಿಯಾದ ಮಾಹಿತಿ ನೀಡಿ. 2008ರಿಂದ 2018ರ ತನಕ ಇಷ್ಟು ಮನೆಗಳು ಅಗಿವೆ ಎಂದು ಸುಪ್ರೀಂ ಕೋರ್ಟ್‍ಗೆ ವರದಿ ನೀಡುವುದು ಅಷ್ಟೇ ನಮ್ಮ ಕೆಲಸ. ವರದಿ ನೀಡೋಣ. ನಂತರ ಕೋರ್ಟ್ ಏನು ತೀರ್ಪು ನೀಡುತ್ತದೆ ನೋಡೋಣ. ಹೆದರಬೇಡಿ‘ ಎಂದು ಜೈಕರ್ ಜೆರೋಮ್ ಅವರು ಧೈರ್ಯ ತುಂಬಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.