ಬೆಂಗಳೂರು: ಡಾ.ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ಇನ್ನೆರಡು ವಾರಗಳಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕಾರಂತ ಬಡಾವಣೆಯಲ್ಲಿ ಈವರೆಗೆ 34 ಸಾವಿರ ನಿವೇಶನಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 29 ಸಾವಿರ ನಿವೇಶನಗಳಿಗೆ ಸಂಖ್ಯೆ ನೀಡಲಾಗುತ್ತಿದೆ. ರಸ್ತೆ, ಚರಂಡಿ, ಕಾಮಗಾರಿ ಮುಗಿದಿದ್ದು, ವಿದ್ಯುತ್, ನೀರು, ಒಳಚರಂಡಿ ಕಾಮಗಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
‘ಸುಪ್ರೀಂಕೋರ್ಟ್ ಕಾರಂತ ಬಡಾವಣೆಯ ನಿರ್ಮಾಣ ಕಾರ್ಯದ ಉಸ್ತುವಾರಿಗೆ ಸಮಿತಿಯನ್ನು ನೇಮಿಸಲಾಗಿತ್ತು. ಅದರಂತೆ ವಹಿಸಿಕೊಳ್ಳಲು 2022ರಲ್ಲಿ ಸೂಚಿಸಿತ್ತು. ಅದರಂತೆ ನಮ್ಮ ಸಮಿತಿ ಉಸ್ತುವಾರಿ ನಡೆಸಿದ್ದು, ವಾರಕ್ಕೆ ಎರಡು ಬಾರಿ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದರು.
‘ಬಡಾವಣೆಗಾಗಿ ಭೂಮಿ ಕಳೆದುಕೊಂಡಿರುವವರಿಗೆ ಪ್ರಥಮವಾಗಿ 60:40 ಅನುಪಾತದಲ್ಲಿ ನಿವೇಶನಗಳನ್ನು ನೀಡಲಾಗುತ್ತದೆ. 5,700 ಕಟ್ಟಡಗಳಲ್ಲಿ ಶೇ 85ರಷ್ಟು ಸಕ್ರಮಗೊಳಿಸಲಾಗಿದೆ. 13 ಬಡಾವಣೆಗಳಿದ್ದವು, ಶಿಕ್ಷಣ ಸಂಸ್ಥೆಗಳಿದ್ದವು ಅವುಗಳನ್ನು ಸಕ್ರಮ ಮಾಡಲಾಗಿದೆ. ಒಂದು ಬೃಹತ್ ಕಟ್ಟಡವನ್ನು ಸಕ್ರಮಗೊಳಿಸಲಾಗಿದೆ. ಕಂದಾಯ ನಿವೇಶನ ಕಳೆದುಕೊಂಡವರಿಗೆ ಸುಮಾರು 2.5 ಸಾವಿರ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ಇದೆಲ್ಲ ಮುಗಿದ ಮೇಲೆ, ಸುಮಾರು ನಾಗರಿಕರಿಗೆ ಹಂಚಿಕೆಯಾಗಲಿದೆ. ಗೌರಿ–ಗಣೇಶ ಹಬ್ಬದ ನಂತರ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಮಾಹಿತಿ ನೀಡಿದರು.
ಸಕ್ರಮಗೊಳಿಸಲಾಗಿರುವ ಎಲ್ಲ ಕಟ್ಟಡಗಳಿಗೆ ಬಿಡಿಎಯಿಂದ ಸಕ್ರಮ ಪತ್ರಗಳನ್ನು ನೀಡಲಾಗಿದೆ. ಸುಪ್ರೀಂಕೋರ್ಟ್ ಆದೇಶದನ್ವಯ ಸಕ್ರಮಗೊಂಡ ಕಟ್ಟಡಗಳು, ಸಂಸ್ಥೆಗಳು, ಖಾಸಗಿ ಬಡಾವಣೆಗಳ ಮಾಲೀಕರು ಅಭಿವೃದ್ಧಿ ಶುಲ್ಕ ಪಾವತಿಸಬೇಕು. ನಂತರ ಅವರಿಗೆ ಖಾತಾ ಪತ್ರಗಳನ್ನು ಬಿಡಿಎ ನೀಡಲಿದೆ ಎಂದರು.
ಬಿಡಿಎ ಕಾಯ್ದೆಯಂತೆ ಶೇ 15ರಷ್ಟು ಪ್ರದೇಶವನ್ನು ಉದ್ಯಾನ ಮತ್ತು ಆಟದ ಮೈದಾನಕ್ಕೆ ಕಾಯ್ದಿರಿಸಲಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ 150 ಎಕರೆಯಷ್ಟು ಜಮೀನನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಗುರುತಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ನೀಡುವ ನಿವೇಶನಗಳನ್ನು ಇದರಲ್ಲಿ ಹೊಂದಾಣಿಕೆ ಮಾಡಲಾಗುವುದು ಎಂದು ತಿಳಿಸಿದರು.
ಸಮಿತಿ ಸದಸ್ಯರಾದ ಬಿಡಿಎ ಮಾಜಿ ಆಯುಕ್ತ ಜಯಕರ್ ಜರೋಮ್, ನಿವೃತ್ತ ಐಪಿಎಸ್ ಅಧಿಕಾರಿ ಡಾ.ಎಸ್.ಟಿ. ರಮೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.