ನವದೆಹಲಿ: ಬೆಂಗಳೂರಿನಲ್ಲಿ ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನದ ಸಂದರ್ಭದಲ್ಲಿ ಶ್ರೀಮಂತರು ಹಾಗೂ ಪ್ರಭಾವಿಗಳ ಜಾಗವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಡಾ.ಶಿವರಾಮ ಕಾರಂತ ಬಡಾವಣೆ ಸಂತ್ರಸ್ತರ ಸಂಘ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪಾರ್ದಿವಾಲಾ ಅವರಿದ್ದ ನ್ಯಾಯಪೀಠ, ಈ ಪ್ರಕರಣದ ಸಂಬಂಧ 2018ರ ಆಗಸ್ಟ್ 3ರಂದು ತೀರ್ಪು ನೀಡಲಾಗಿತ್ತು. ಈಗ ಈ ಅರ್ಜಿಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗದು ಎಂದಿತು.
ಸಂಘದ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಮಹಾಲಕ್ಷ್ಮಿ ಪಾವನಿ, 2018ರ ಅ.30ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹೊರಡಿಸಿದ ಅಂತಿಮ ಅಧಿಸೂಚನೆಯಲ್ಲಿ ಹಲವು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
2018ರ ಆ. 3ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಉತ್ತರ ಭಾಗದಲ್ಲಿ 3,526 ಎಕರೆ ಸ್ವಾಧೀನಪಡಿಸಿಕೊಳ್ಳಲು ನಿರ್ದೇಶಿಸಿತ್ತು. ಆದರೆ, ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿಯ ವರದಿಯಲ್ಲಿ ಶ್ರೀಮಂತರು ಹಾಗೂ ಪ್ರಭಾವಿಗಳ 300ಕ್ಕೂ ಆಸ್ತಿಗಳನ್ನು ಭೂಸ್ವಾಧೀನದಿಂದ ಕೈಬಿಡುವಂತೆ ಶಿಫಾರಸು ಮಾಡಲಾಗಿದೆ ಎಂದು ವಾದಿಸಿದರು.
ಭೂಸ್ವಾಧೀನ ಕಾನೂನಿನಂತೆ ಸರಿಯಾದ ಪರಿಹಾರವನ್ನೂ ನೀಡಲಾಗುತ್ತಿಲ್ಲ. ಈ ವಿಚಾರದಲ್ಲಿ ಗೊಂದಲಗಳಿವೆ. ಅಧಿಕಾರಿಗಳು ವಿವಾದಾತ್ಮಕ ಅಧಿಸೂಚನೆಗಳನ್ನು ಹೊರಡಿಸುತ್ತಿದ್ದಾರೆ. ಈ ಪ್ರಕ್ರಿಯೆಗಳು ಏಕ ಪ್ರಕಾರವಾಗಿಲ್ಲ. ಗಂಭೀರ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ಅವರು ಗಮನಕ್ಕೆ ತಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.