ADVERTISEMENT

ಶಿವಪುರ ಕೆರೆ: ಕಾಮಗಾರಿ ವೇಗಕ್ಕೆ ಮೊರೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 20:15 IST
Last Updated 10 ಜೂನ್ 2024, 20:15 IST
ಶಿವಪುರ ಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ
ಶಿವಪುರ ಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ   

ಪೀಣ್ಯ ದಾಸರಹಳ್ಳಿ: ಒಂದೂವರೆ ವರ್ಷದ ಹಿಂದೆ ಆರಂಭವಾಗಿರುವ ಶಿವಪುರ ಕೆರೆ ಪುನರುಜ್ಜೀವನ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿಯೂ ಸಮರ್ಪಕವಾಗಿಲ್ಲವೆಂದು ಸ್ಥಳೀಯರು ದೂರುತ್ತಿದ್ದಾರೆ.

ಅಮೃತ ನಗರೋತ್ಥಾನ ಯೋಜನೆಯಡಿ ಶಿವಪುರ ಕೆರೆ ಅಭಿವೃದ್ಧಿಗಾಗಿ ₹2 ಕೋಟಿ ಅನುದಾನ ನೀಡಲಾಗಿದೆ. ಸದ್ಯಕ್ಕೆ ಕೆರೆ ಹೂಳೆತ್ತುವ ಕಾರ್ಯ ಮುಗಿದಿದೆ. ಕೆರೆಯ ಸುತ್ತಲೂ ನಡಿಗೆ ಪಥ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕೈಗಾರಿಕೆಗಳ ತ್ಯಾಜ್ಯ ಮತ್ತು ಒಳಚರಂಡಿ ನೀರು ಕೆರೆಗೆ ಸೇರದಂತೆ ಪೈಪ್‌ಲೈನ್ ಅಳವಡಿಸಲಾಗಿದೆ.

ಕೆರೆ ಏರಿಯ ಒಳಭಾಗಕ್ಕೆ ಕಲ್ಲಿನ ಜೋಡಣೆ (ಪಿಚ್ಚಿಂಗ್‌) ನಡೆಯುತ್ತಿದೆ. ಕೋಡಿ ನಿರ್ಮಾಣ ಮುಗಿದಿದೆ. ಕೆರೆಯ ಸುತ್ತ ತಂತಿ ಬೇಲಿ ಹಾಕುವುದು, ಗೇಟ್‌ ಅಳವಡಿಕೆ ಮತ್ತು ಶೌಚಾಲಯ ನಿರ್ಮಾಣ ಕಾರ್ಯ ಬಾಕಿ ಇದೆ. ಕಾಮಗಾರಿ ಮುಂದುವರಿದೆ.

ADVERTISEMENT

ಶಿವಪುರ ಕೆರೆ ಆರು ಎಕರೆ ಹನ್ನೊಂದು ಗುಂಟೆ ವಿಸ್ತೀರ್ಣವಿದ್ದು, ಇದರಲ್ಲಿ ಐದು ಅಡಿ ಜಾಗವನ್ನು ಕಾರ್ಖಾನೆಯವರು ಒತ್ತುವರಿ ಮಾಡಿದ್ದಾರೆ. ಅದನ್ನು ತೆರವುಗೊಳಿಸಲಾಗುವುದು ಎಂದು ಸಹಾಯಕ ಎಂಜಿನಿಯರ್ ಶ್ರೀಧರ್ ಮಾಹಿತಿ ನೀಡಿದರು.

ಹೀಗಿತ್ತು ಕೆರೆ: ನಾಲ್ಕು ದಶಕಗಳ ಹಿಂದೆ ಇದೇ ಶಿವಪುರ ಕೆರೆ ಜನ–ಜಾನುವಾರುಗಳಿಗೆ ನೀರಾಸರೆಯಾಗಿತ್ತು. ನಗರ ಬೆಳೆದಂತೆ ಕೆರೆಯ ಸುತ್ತ ಕಟ್ಟಡದ ಅವಶೇಷಗಳನ್ನು ರಾಶಿ ಹಾಕಲಾಯಿತು. ನಂತರ ಕೈಗಾರಿಕಾಗಳ ತ್ಯಾಜ್ಯ, ಒಳಚರಂಡಿ ನೀರು ಕೆರೆ ಸೇರಿ, ನೀರು ಕಲುಷಿತಗೊಂಡಿತು. ದನ–ಕರುಗಳು ಸಹ ನೀರು ಕುಡಿಯಲು ಸಾಧ್ಯವಾಗದಷ್ಟು ಮಲಿನವಾಯಿತು. ಎಷ್ಟೋ ಸಾರಿ ಬೀಡಾಡಿ ದನಗಳು ಬಾಯಾರಿ ನೀರು ಕುಡಿಯಲು ಕೆರೆಗೆ ಹೋಗಿ ಕೆಸರಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದವು ಎಂದು ಸ್ಥಳೀಯರು ವಿವರಿಸಿದರು.

ಕೆರೆ ಅಭಿವೃದ್ಧಿಪಡಿಸಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿದ್ದರು. ಜನರ ಮನವಿಗೆ ಸ್ಪಂದಿಸಿದ ಪಾಲಿಕೆ, ಕೆರೆ ಪುನರುಜ್ಜೀವನಕ್ಕೆ ಮುಂದಾಗಿದೆ. 

‘ಕಲುಷಿತವಾಗಿದ್ದ ಕೆರೆಯ ಪುನರುಜ್ಜೀವನ ಕಾರ್ಯ ಆರಂಭವಾಗಿದೆ. ಆದರೆ, ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಸ್ಥಳೀಯ ನಿವಾಸಿ ದಾಸಪ್ಪ ಒತ್ತಾಯಿಸಿದರು.

'ಕೆರೆ ಅಭಿವೃದ್ಧಿ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಸಂಬಂಧಪಟ್ಟವರು ಪರಿಶೀಲಿಸಿ, ಕ್ರಮ ಜರುಗಿಸಬೇಕು'ಎಂದು ಸ್ಥಳೀಯ ನಿವಾಸಿ ಕೆಂಪರಾಜು ಆಗ್ರಹಿಸಿದರು.

ಶಿವಪುರ ಕೆರೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯ ವಿಹಂಗಮ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.