ಬೆಂಗಳೂರು: ಶಿವರಾತ್ರಿ ದಿನ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಬೇಕು. ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಮುಜರಾಯಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ರಾಜ್ಯದಲ್ಲಿ ಶಾಂತಿ, ಸಂಯಮದೊಂದಿಗೆ ಜನರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಸ್ನೇಹ ಉಂಟಾಗಲೆಂದು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಬೇಕು. ರುದ್ರಾಭಿಷೇಕ, ರುದ್ರಹೋಮ ಪೂಜಾಕಾರ್ಯಗಳನ್ನು ವಿಶೇಷವಾಗಿ ನೆರವೇರಿಸಬೇಕು.
ಯಕ್ಷಗಾನ, ವೀರಭದ್ರ ಕುಣಿತ, ಡೊಳ್ಳು ಕುಣಿತ, ದೇಸಿ ವಾದ್ಯಗಳು, ಭರತನಾಟ್ಯ, ಭಕ್ತಿಗೀತೆ, ಸಾಂಪ್ರದಾಯಿಕ ಜನಪದ ಕಲೆಗಳು, ದಕ್ಷಯಜ್ಞ, ಶನಿಮಹಾತ್ಮೆ ಮುಂತಾದ ಶಿವ ಸಂಬಂಧಿ ಪಾರಂಪರಿಕ ಸ್ಥಳೀಯ ಕಿರುನಾಟಕಗಳನ್ನು, ಶಿವಪುರಾಣ, ಕಥಾ ಶ್ರವಣಗಳನ್ನು ಆಯೋಜಿಸಬೇಕು.
ಮರೆಯಾಗುತ್ತಿರುವ ಸಾಂಸ್ಕೃತಿಕ ಕಲೆಗಳಾದ ಗೊಂಬೆಯಾಟ, ಕೋಲಾಟಗಳನ್ನು ಕಲಾವಿದರ ಲಭ್ಯತೆ ನೋಡಿಕೊಂಡು ಹಮ್ಮಿಕೊಳ್ಳಬಹುದು ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.