ADVERTISEMENT

ಸಿರಿಧಾನ್ಯ ರಫ್ತಿಗೆ ಯೋಜನೆ: ಸಚಿವೆ ಶೋಭಾ

ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ l ಆಹಾರ ಪದಾರ್ಥಗಳ ರಫ್ತಿನಲ್ಲಿ ಭಾರತಕ್ಕೆ 9ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 22:58 IST
Last Updated 20 ಜನವರಿ 2023, 22:58 IST
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ‘ಅಂತರರಾಷ್ಟ್ರೀಯ ಸಿರಿಧಾನ್ಯ ಮೇಳ’ದಲ್ಲಿ ರಾಗಿ ರಾಶಿಯನ್ನು ಮಹಿಳೆಯರು ಅಲಂಕರಿಸಿದರು       – ಪ್ರಜಾವಾಣಿ ಚಿತ್ರ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ‘ಅಂತರರಾಷ್ಟ್ರೀಯ ಸಿರಿಧಾನ್ಯ ಮೇಳ’ದಲ್ಲಿ ರಾಗಿ ರಾಶಿಯನ್ನು ಮಹಿಳೆಯರು ಅಲಂಕರಿಸಿದರು       – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಿರಿಧಾನ್ಯಗಳನ್ನೂ ವಿದೇಶಕ್ಕೆ ರಫ್ತು ಮಾಡಲು ಕೇಂದ್ರವು ಯೋಜನೆ ರೂಪಿಸಿದೆ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಕೃಷಿ ಇಲಾಖೆ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳದಲ್ಲಿ ಮಾತನಾಡಿದ ಅವರು, ‘ಆಹಾರ ಪದಾರ್ಥಗಳ ರಫ್ತಿನಲ್ಲಿ ಭಾರತವು ವಿಶ್ವದಲ್ಲಿಯೇ 9ನೇ ಸ್ಥಾನದಲ್ಲಿದೆ. ಸ್ಥಳೀಯವಾಗಿ ಬೆಳೆಯುವ ಜೋಳ, ರಾಗಿ, ಊದಲು, ನವಣೆ, ಹಾರಕ, ಕೊರಲೆ, ಸಾಮೆಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸಲು ತೀರ್ಮಾನಿಸಿದೆ. ಗುಣಮಟ್ಟದ ಸಿರಿಧಾನ್ಯ ಬೆಳೆದರೆ ಅಂತರರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸಲು ಸಾಧ್ಯವಾಗಲಿದೆ. ಕೀಟನಾಶಕ ಹಾಗೂ ರಸಗೊಬ್ಬರ ಬಳಸದಿರುವ ಸಿರಿಧಾನ್ಯಕ್ಕೆ ಬೇಡಿಕೆ ಹೆಚ್ಚಿದೆ’ ಎಂದು ಹೇಳಿದರು.

‘ದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಉತ್ಪಾದನೆಯಾಗುತ್ತಿದೆ. ದೇಶದಲ್ಲಿ 21.4 ಕೋಟಿ ಟನ್‌ ಆಹಾರ ಹಾಗೂ 34.5 ಕೋಟಿ ಟನ್‌ ಹಣ್ಣು ಹಾಗೂ ತರಕಾರಿ ಉತ್ಪಾದನೆಯಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಸಚಿವ ಕೈಲಾಶ್ ಚೌಧರಿ ಮಾತನಾಡಿ, ‘ಕೃಷಿ ಕ್ಷೇತ್ರದಲ್ಲಿ ಹೊಸ ತಾಂತ್ರಿಕತೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ರಫ್ತು ಹೆಚ್ಚಿದರೆ ರೈತರ ಬದುಕು ಹಸನಾಗಲಿದೆ. ಸಾವಯವ ಕೃಷಿಗೆ ರೈತರು ಹೆಚ್ಚಿನ ಆದ್ಯತೆ ನೀಡಬೇಕು’ ಎಂದರು.‌

ಮೇಳಕ್ಕೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ‘ರೈತರ ಬದುಕಿನ ಅನಿಶ್ಚಿತತೆ ಬದಲಾಯಿಸಲು ವೈಜ್ಞಾನಿಕ ವರದಿ ಸಿದ್ಧಪಡಿಸಬೇಕು. ಬೇರೆ ದೇಶಗಳಲ್ಲಿ 10 ವರ್ಷದ ಮಳೆ ಪ್ರಮಾಣ, ಬಿತ್ತನೆ ಪ್ರಮಾಣ, ಆಹಾರ ಪದಾರ್ಥಗಳ ಉತ್ಪಾದನೆ, ಅಂತರರಾಷ್ಟ್ರೀಯ ಮಾರುಕಟ್ಟೆ, ಸ್ಥಳೀಯ ಮಾರುಕಟ್ಟೆ ಆಧರಿಸಿ ವರದಿ ತಯಾರಿಸುತ್ತಾರೆ. ರಾಜ್ಯದಲ್ಲೂ ಆ ಮಾದರಿಯಲ್ಲಿಯೇ ವರದಿ ತಯಾರಿಸಬೇಕು’ ಎಂದು ಸೂಚಿಸಿದರು.

‘ಗ್ರಾಮೀಣ ಪ್ರದೇಶದಲ್ಲಿ ಸಾಲ ನೀಡುವ ಪದ್ಧತಿ ಬದಲಾಗಬೇಕಾಗಿದೆ. ರಾಜ್ಯ ಸರ್ಕಾರ ಈ ವರ್ಷ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲದ ನೆರವು ನೀಡಿದ್ದು, 3 ಲಕ್ಷ ಹೊಸ ರೈತರಿಗೆ ಸಾಲ ನೀಡಲಾಗಿದೆ’ ಎಂದು ಹೇಳಿದರು.

*

ಆಹಾರ ಧಾನ್ಯಗಳ ಉತ್ಪಾದನೆ ಹಾಗೂ ವಾಣಿಜ್ಯ ಬೆಳೆಗಳ ನಡುವೆ ಸಮತೋಲನ ಕಾಯ್ದುಕೊಳ್ಳದಿದ್ದರೆ ಆಹಾರ ಭದ್ರತೆಗೆ ತೊಂದರೆಯಾಗಲಿದೆ.
–ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

*

ಪೌಷ್ಟಿಕಾಂಶದ ಬಗ್ಗೆ ಚಿಂತಿಸುವ ಕಾಲ ಹತ್ತಿರವಾಗಿದೆ. ₹ 25 ಕೋಟಿ ವೆಚ್ಚದಲ್ಲಿ ರಾಯಚೂರಿನಲ್ಲಿ ಸಿರಿಧಾನ್ಯ ಪಾರ್ಕ್‌ ನಿರ್ಮಿಸಲಾಗುವುದು.
–ಬಿ.ಸಿ.ಪಾಟೀಲ, ಕೃಷಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.