ADVERTISEMENT

ಡೆಂಗಿ ತುರ್ತು ಪರಿಸ್ಥಿತಿ ಘೋಷಿಸಿ: ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 19:07 IST
Last Updated 7 ಜುಲೈ 2024, 19:07 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಡೆಂಗಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಡೆಂಗಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು   

ಬೆಂಗಳೂರು: ‘ರಾಜ್ಯದಲ್ಲಿ ಕೂಡಲೇ ಡೆಂಗಿ ತುರ್ತು ಪರಿಸ್ಥಿತಿ ಘೋಷಿಸಬೇಕು. ಸರ್ಕಾರದಿಂದಲೇ ಡೆಂಗಿ ಪರೀಕ್ಷೆಯನ್ನು ಉಚಿತವಾಗಿ ಮಾಡಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿದ ಅವರು, ಡೆಂಗಿ ರೋಗಿಗಳ ಚಿಕಿತ್ಸೆಗೆ ಲಭ್ಯವಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಡೆಂಗಿ ತೀವ್ರವಾಗಿ ಹರಡುತ್ತಿದೆ. ಹೀಗಿರುವಾಗ ಸರ್ಕಾರವು ಪ್ರತಿ ತಾಲ್ಲೂಕಿನಲ್ಲೂ ಕಾರ್ಯಪಡೆ ರಚಿಸಬೇಕಿತ್ತು. ರೋಗ ನಿಯಂತ್ರಣಕ್ಕೆ ಕ್ರಮಗಳನ್ನು ವಹಿಸಬೇಕಿತ್ತು. ಇವ್ಯಾವುದನ್ನೂ ಮಾಡಿಲ್ಲ’ ಎಂದು ಟೀಕಿಸಿದರು.

‘ನಗರದ ಎಲ್ಲೆಡೆ ಕಸದ ರಾಶಿ ಇದೆ. ಮಳೆಯಿಂದಾಗಿ ಅಲ್ಲಲ್ಲಿ ನೀರು ನಿಲ್ಲುತ್ತಿದೆ. ಇವೆಲ್ಲವೂ ಸೊಳ್ಳೆಗಳು ಹೆಚ್ಚಾಗಲು ಕಾರಣವಾಗುತ್ತಿವೆ. 100 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದರೆ ಅವರಲ್ಲಿ 13–14 ಮಂದಿಗೆ ಡೆಂಗಿ ಲಕ್ಷಣಗಳು ಇರುವುದು ಪತ್ತೆಯಾಗುತ್ತಿದೆ. ಪ್ರತಿದಿನ ಮೂರರಿಂದ ನಾಲ್ಕು ಮಂದಿ ಡೆಂಗಿಗೆ ಬಲಿಯಾಗುತ್ತಿದ್ದಾರೆ. ರಾಜ್ಯದಲ್ಲಿ ಅಂದಾಜು 2 ಲಕ್ಷ ಜನರು ಡೆಂಗಿಗೆ ಒಳಗಾಗಿದ್ದಾರೆ. ಬೇರೆ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಡೆಂಗಿ ಬಂದರೆ ಸಾವಿನ ಅಪಾಯ ಹೆಚ್ಚು ಇರುತ್ತದೆ. ಜನರು ಆತಂಕಗೊಂಡಿದ್ದಾರೆ. ಆದರೆ ಸರ್ಕಾರ ಮಾತ್ರ ಎಚ್ಚೆತ್ತಿಲ್ಲ’ ಎಂದು ದೂರಿದರು.

ADVERTISEMENT

‘ಸರ್ಕಾರವು ಡೆಂಗಿ ತುರ್ತು ಪರಿಸ್ಥಿತಿ ಘೋಷಿಸಿದರಷ್ಟೇ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಲು ಸಾಧ್ಯ. ಕಸದ ರಾಶಿಯನ್ನು ತೆರವು ಮಾಡುವತ್ತ ಸರ್ಕಾರ ಗಮನಹರಿಸಬೇಕು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರನ್ನು ಬಳಸಿಕೊಂಡು ಮನೆ–ಮನೆಗೆ ಹೋಗಿ ಡೆಂಗಿ ಪರೀಕ್ಷೆ ಮಾಡಿಸಬೇಕು. ಪ್ರತಿ ಆಸ್ಪತ್ರೆಯಲ್ಲೂ ಡೆಂಗಿಗೆ ಒಂದು ವಾರ್ಡ್‌ ಅನ್ನು ಮೀಸಲಿಡಬೇಕು’ ಎಂದು ಅಶೋಕ ಒತ್ತಾಯಿಸಿದರು.

ಬಿಬಿಎಂಪಿ ಆಯುಕ್ತರಿಗೇ ಸೊಳ್ಳೆ ಕಚ್ಚಿ ಡೆಂಗಿ ಬಂದಿದೆ. ಹೀಗಿರುವಾಗ ಬಿಬಿಎಂಪಿಯಿಂದ ಬೇರೆಯವರನ್ನು ಕಾಪಾಡಲು ಸಾಧ್ಯವಿಲ್ಲ ಎಂಬ ಆತಂಕ ಜನರಲ್ಲಿ ಮೂಡಿದೆ
ಆರ್‌.ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ

ಆಗ್ರಹಗಳು

  • ಡೆಂಗಿ ಬಗ್ಗೆ ಜನರಲ್ಲಿ ಉಂಟಾಗಿರುವ ಆತಂಕವನ್ನು ನಿವಾರಿಸಲು ಸರ್ಕಾರ ಜಾಗೃತಿ ಕಾರ್ಯಕ್ರಮ ನಡೆಸಬೇಕು

  • ಉದ್ಯಾನ ಸಾರ್ವಜನಿಕ ಸ್ಥಳ ನೀರು ನಿಲ್ಲುವ ಸ್ಥಳಗಳಲ್ಲಿ ಕಸ ನಿವಾರಣೆಗೆ ಕ್ರಮ ತೆಗೆದುಕೊಳ್ಳಬೇಕು

  • ಸೊಳ್ಳೆಗಳ ನಿಯಂತ್ರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಅಗತ್ಯವಿರುವೆಡೆಯಲ್ಲಿ ಫಾಗಿಂಗ್‌ ಮಾಡಿಸಬೇಕು

  • ಶಾಸಕರು ಮತ್ತು ಸಚಿವರು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಸೀಲನೆ ನಡೆಸಬೇಕು ರೋಗಿಗಳಿಗೆ ಧೈರ್ಯ ಹೇಳಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.