ಬೆಂಗಳೂರು: ‘ನಟ ಅರ್ಜುನ್ ಸರ್ಜಾ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿ ನಟಿ ಶ್ರುತಿ ಹರಿಹರನ್ ನೀಡಿರುವ ದೂರಿನ ತನಿಖೆ ಚುರುಕುಗೊಳಿಸಿರುವ ಕಬ್ಬನ್ ಪಾರ್ಕ್ ಪೊಲೀಸರು, ‘ಠಾಣೆಗೆ ಹಾಜರಾಗಿ ಘಟನೆ ಬಗ್ಗೆ ಹೇಳಿಕೆ ನೀಡಿ’ ಎಂದು ಸಾಕ್ಷಿದಾರರಿಗೆ ನೋಟಿಸ್ ನೀಡಿದ್ದಾರೆ.
ಶ್ರುತಿ ನೀಡಿದ್ದ ದೂರಿನಲ್ಲಿಸ್ನೇಹಿತರಾದ ಬೋರೇಗೌಡ, ಕಿರಣ್, ಯಶಸ್ವಿನಿ ಹಾಗೂ ‘ವಿಸ್ಮಯ’ ಸಿನಿಮಾದ ಸಹ ನಿರ್ದೇಶಕರಾದ ಭರತ್ ನೀಲಕಂಠ ಮತ್ತು ಮೋನಿಕಾ ಅವರ ಹೆಸರು ಉಲ್ಲೇಖಿಸಿದ್ದರು. ಅವರೆಲ್ಲರಿಗೂ ನೋಟಿಸ್ ಕೊಟ್ಟಿರುವ ಪೊಲೀಸರು, ಸೋಮವಾರ ಠಾಣೆಗೆ ಕರೆಸಿ ಹೇಳಿಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.
ಶನಿವಾರವೇ ತ್ವರಿತವಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಶ್ರುತಿ ಅವರ ಸಮ್ಮುಖದಲ್ಲೇ ಮಹಜರು ಮುಗಿಸಿದ್ದಾರೆ.‘ವಿಸ್ಮಯ’ ಸಿನಿಮಾ ಚಿತ್ರೀಕರಣ ನಡೆದಿದ್ದ ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜು ಆವರಣದ ಬಂಗಲೆ, ಯು.ಬಿ. ಸಿಟಿಯ ಪಬ್ ಹಾಗೂದೇವನಹಳ್ಳಿ ಸಿಗ್ನಲ್‌ಗೆ ಶ್ರುತಿ ಅವರನ್ನು ಕರೆದೊಯ್ದು ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
‘ಇದೊಂದು ಸೂಕ್ಷ್ಮ ಪ್ರಕರಣ.ಪುರಾವೆಗಳನ್ನು ಕಲೆ ಹಾಕುವುದು ಮುಖ್ಯ. ಶ್ರುತಿ ಅವರನ್ನು ಸೋಮವಾರ ನ್ಯಾಯಾಧೀಶರ ಮುಂದೆ ಕರೆದೊಯ್ದು, ಸಿಆರ್‌ಪಿಸಿ 164ರಡಿ ಹೇಳಿಕೆ ದಾಖಲಿಸಲಿದ್ದೇವೆ. ಜೊತೆಗೆ, ಶ್ರುತಿಯವರ ದೂರಿನಲ್ಲಿ ಕೆಲವು ಸಾಕ್ಷಿದಾರರ ಹೆಸರುಗಳಿವೆ. ಅವರೆಲ್ಲರಿಗೂ ಘಟನೆ ಬಗ್ಗೆ ಗೊತ್ತು ಎಂದು ಶ್ರುತಿ ಹೇಳಿದ್ದಾರೆ. ಆ ಸಾಕ್ಷಿದಾರರು ಠಾಣೆಗೆ ಬಂದು ಹೇಳಿಕೆ ಕೊಟ್ಟ ನಂತರ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಡಿ. ದೇವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ವಕೀಲರ ಭೇಟಿಯಾದ ಅರ್ಜುನ್: ಪ್ರಕರಣದ ಬಗ್ಗೆ ಪೊಲೀಸರು ಪುರಾವೆಗಳನ್ನು ಕಲೆಹಾಕುತ್ತಿರುವ ಬೆನ್ನಲ್ಲೇ ಅರ್ಜುನ್ ಸರ್ಜಾ, ತಮ್ಮ ಪರ ವಕೀಲ ಶ್ಯಾಮಸುಂದರ್ ಅವರನ್ನು ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಶ್ರುತಿ ವಿರುದ್ಧ ಮೆಯೋಹಾಲ್ ನ್ಯಾಯಾಲಯದಲ್ಲಿ ಧ್ರುವ್ ಸರ್ಜಾ ಹೂಡಿರುವ ಮೊಕದ್ದಮೆಯ ತೀರ್ಪು ಸೋಮವಾರ ಹೊರಬೀಳಲಿದೆ. ಜೊತೆಗೆ, ಕಬ್ಬನ್ ಪಾರ್ಕ್ ಪೊಲೀಸರು ನೋಟಿಸ್ ನೀಡಿದರೆ ಯಾವ ಪ್ರತಿಕ್ರಿಯೆ ನೀಡಬೇಕು ಎಂಬ ಬಗ್ಗೆ ಸರ್ಜಾ ವಕೀಲರೊಂದಿಗೆ ಚರ್ಚಿಸಿದರು ಎಂದು ಗೊತ್ತಾಗಿದೆ.
ಭೇಟಿ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಶ್ಯಾಮಸುಂದರ್, ‘ಸರ್ಜಾ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ತಮ್ಮ ಕೆಲಸ ಮಾಡುತ್ತಿದ್ದಾರೆ. ನಾವು ಕಾನೂನಿನಡಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನೆ ನಡೆಸಿದ್ದೇವೆ’ ಎಂದರು.
‘ಸಜ್ಜನ ವ್ಯಕ್ತಿ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಸಂಚು ಇದು ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಇಂಥ ಕುತಂತ್ರ ಹಾಗೂ ಸುಳ್ಳು ಹೆಚ್ಚು ದಿನ ಇರುವುದಿಲ್ಲ’ ಎಂದರು.
ಕಮಿಷನರ್ ಭೇಟಿಯಾದ ಡಿಸಿಪಿ: ಪ್ರಕರಣದ ಮಹಜರು ಸೇರಿದಂತೆ ಹಲವು ದಾಖಲೆಗಳ ಸಮೇತವಾಗಿ ನಗರ ಪೊಲೀಸ್ ಕಮಿಷನರ್ ಟಿ. ಸುನೀಲ್‌ಕುಮಾರ್ ಅವರನ್ನು ಭೇಟಿಯಾದ ಡಿಸಿಪಿ ದೇವರಾಜ್, ತನಿಖೆ ಪ್ರಗತಿ ಬಗ್ಗೆ ವಿವರಿಸಿದ್ದಾರೆ ಎಂದು ಗೊತ್ತಾಗಿದೆ.
ನ್ಯಾಯಾಲಯವು ಅಂಗೀಕರಿಸುವ ಪುರಾವೆಗಳು ಸಿಕ್ಕ ಬಳಿಕ ಆರೋಪಿಗೆ ನೋಟಿಸ್ ನೀಡುವ ಬಗ್ಗೆಯೂ ಭೇಟಿ ವೇಳೆ ಚರ್ಚಿಸಲಾಗಿದೆ ಎಂದು ಗೊತ್ತಾಗಿದೆ.
ವಕೀಲರ ಭೇಟಿಯಾದ ಅರ್ಜುನ್
ಪ್ರಕರಣದ ಬಗ್ಗೆ ಪೊಲೀಸರು ಪುರಾವೆಗಳನ್ನು ಕಲೆಹಾಕುತ್ತಿರುವ ಬೆನ್ನಲ್ಲೇ ಅರ್ಜುನ್ ಸರ್ಜಾ, ತಮ್ಮ ಪರ ವಕೀಲ ಶ್ಯಾಮಸುಂದರ್ ಅವರನ್ನು ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಶ್ರುತಿ ವಿರುದ್ಧ ಮೆಯೋಹಾಲ್ ನ್ಯಾಯಾಲಯದಲ್ಲಿ ಧ್ರುವ್ ಸರ್ಜಾ ಹೂಡಿರುವ ಮೊಕದ್ದಮೆಯ ತೀರ್ಪು ಸೋಮವಾರ ಹೊರಬೀಳಲಿದೆ. ಜೊತೆಗೆ, ಕಬ್ಬನ್ ಪಾರ್ಕ್ ಪೊಲೀಸರು ನೋಟಿಸ್ ನೀಡಿದರೆ ಯಾವ ಪ್ರತಿಕ್ರಿಯೆ ನೀಡಬೇಕು ಎಂಬ ಬಗ್ಗೆ ಸರ್ಜಾ ವಕೀಲರೊಂದಿಗೆ ಚರ್ಚಿಸಿದರು ಎಂದು ಗೊತ್ತಾಗಿದೆ.
ಭೇಟಿ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಶ್ಯಾಮಸುಂದರ್, ‘ಸರ್ಜಾ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ತಮ್ಮ ಕೆಲಸ ಮಾಡುತ್ತಿದ್ದಾರೆ. ನಾವು ಕಾನೂನಿನಡಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನೆ ನಡೆಸಿದ್ದೇವೆ’ ಎಂದರು.
‘ಸಜ್ಜನ ವ್ಯಕ್ತಿ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಸಂಚು ಇದು ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಇಂಥ ಕುತಂತ್ರ ಹಾಗೂ ಸುಳ್ಳು ಹೆಚ್ಚು ದಿನ ಇರುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.