ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮನೆಗಳು ಭಾನುವಾರ ಇಡೀ ದಿನ ಚಟುವಟಿಕೆಯ ಕೇಂದ್ರಗಳಾಗಿ ದ್ದವು. ಮುಖ್ಯಮಂತ್ರಿ ಸ್ಥಾನ ಪಡೆಯಲು ಬಲವಾದ ಪಟ್ಟುಹಾಕುವ ಪ್ರಯತ್ನಗಳನ್ನು ಇಬ್ಬರೂ ನಾಯಕರು ತಮ್ಮ ಮನೆಗಳಿಂದಲೇ ಆರಂಭಿಸಿದರು.
ಕುಮಾರ ಪಾರ್ಕ್‌ನಲ್ಲಿರುವ ಸಿದ್ದರಾಮಯ್ಯ ಅವರ ಸರ್ಕಾರಿ ಬಂಗಲೆಗೆ ಬೆಳಿಗ್ಗೆಯಿಂದಲೇ ನೂತನ ಶಾಸಕರು, ಕಾಂಗ್ರೆಸ್ ಮುಖಂಡರು ತಂಡೋಪತಂಡವಾಗಿ ಬರಲಾರಂಭಿಸಿದ್ದರು. ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವ ಫ್ಲೆಕ್ಸ್‌ಗಳನ್ನು ಅವರ ಬೆಂಬಲಿಗರು ಅಳವಡಿಸಿದ್ದರು. ‘ಸಿದ್ದರಾಮಯ್ಯ ಮುಖ್ಯಮಂತ್ರಿ, ಜಮೀರ್ ಅಹಮ್ಮದ್ ಉಪ ಮುಖ್ಯಮಂತ್ರಿ’ ಎಂಬ ಫ್ಲೆಕ್ಸ್ ಕೂಡ ಅಲ್ಲಿ ಕಂಡುಬಂತು.
ಕೃಷ್ಣ ಬೈರೇಗೌಡ ಸೇರಿದಂತೆ ಹಲವು ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಹರಪನಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿರುವ ಪಕ್ಷೇತರ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಭೇಟಿ ಮಾಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ತಿಳಿಸಿದರು.
ಮಧ್ಯಾಹ್ನದ ವೇಳೆ ಮನೆಯಿಂದ ಹೊರಹೋದ ಸಿದ್ದರಾಮಯ್ಯ, ಸಂಜೆವರೆಗೂ ತಮ್ಮ ಆಪ್ತ ಶಾಸಕರ ಜತೆ ರಹಸ್ಯ ಸಭೆಗಳನ್ನು ನಡೆಸಿದರು. ಶಾಸಕ ಕೆ.ಜೆ. ಜಾರ್ಜ್ ಅವರ ಮನೆಯಲ್ಲಿ ಒಂದು ಸುತ್ತಿನ ಚರ್ಚೆ ನಡೆಸಿದ ಅವರು, ಅಲ್ಲಿಂದ ಜಾರ್ಜ್ ಅವರ ಅತಿಥಿ ಗೃಹಕ್ಕೆ ಬಂದು ಒಂದು ಸುತ್ತಿನ ಚರ್ಚೆ ನಡೆಸಿದರು. ನಂತರ ಶಾಸಕಾಂಗ ಪಕ್ಷದ ಸಭೆಗೆ ಬಂದರು.
ಮನೆಯಲ್ಲೇ ಬಲ ಪ್ರದರ್ಶನ: ಸದಾಶಿವನಗರದಲ್ಲಿರುವ ಶಿವಕುಮಾರ್ ಮನೆಯಲ್ಲೂ ಬೆಳಿಗ್ಗೆಯಿಂದಲೇ ಜನಜಂಗುಳಿ ಇತ್ತು. ಅವರ ಬೆಂಬಲಿಗ ಶಾಸಕರು ತಂಡೋಪತಂಡವಾಗಿ ಬಂದು ಭೇಟಿಮಾಡಿದರು. ‘ಡಿ.ಕೆ. ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ’ ಎಂದು ಬಿಂಬಿಸುವ ಫ್ಲೆಕ್ಸ್ ಅವರ ಮನೆಯ ಮುಂಭಾಗದಲ್ಲಿ ಇತ್ತು.
ವಿವಿಧ ಮಠಗಳಿಗೆ ಭೇಟಿ ನೀಡಲು ತುಮಕೂರು ಜಿಲ್ಲೆಗೆ ತೆರಳಿದ್ದ ಶಿವಕುಮಾರ್ ಸಂಜೆಯ ವೇಳೆಗೆ ಮನೆಗೆ ವಾಪಸಾದರು. ಆಂಧ್ರಪ್ರದೇಶದ ಅಹೋಬಿಲದಿಂದ ಬಂದಿದ್ದ ಅರ್ಚಕರು ಮನೆಯಲ್ಲಿ ಪೂಜೆ ನೆರವೇರಿಸಿ, ಪ್ರಸಾದ ನೀಡಿದರು.
ಶಿವಕುಮಾರ್ ಮನೆಗೆ ತಲುಪಿರುವ ಮಾಹಿತಿ ಅರಿತ ಅವರ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಅಲ್ಲಿಗೆ ದೌಡಾಯಿಸಿದರು. ಹಲವು ಮಂದಿ ಶಾಸಕರೂ ಅಲ್ಲಿದ್ದರು. ಶಿವಕುಮಾರ್ ಶಾಸಕರ ಜತೆ ಸಭೆ ನಡೆಸುತ್ತಿ ದ್ದರೆ, ಬೆಂಬಲಿಗರು ಮನೆಯ ಮುಂದೆ ಘೋಷಣೆ ಕೂಗಿದರು. ಅವರನ್ನೇ ಮುಖ್ಯಮಂತ್ರಿ ಮಾಡುವಂತೆ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.