ADVERTISEMENT

ಸೈಲೆನ್ಸರ್ ಮಾರ್ಪಾಡು: ಹೆಚ್ಚಿದ ಕಿರಿಕಿರಿ

ವೃದ್ಧರು, ವಿದ್ಯಾರ್ಥಿಗಳು, ರೋಗಿಗಳಿಗೆ ಆಪತ್ತು ತರುತ್ತಿರುವ ಕರ್ಕಶ ಶಬ್ದ

ಆದಿತ್ಯ ಕೆ.ಎ
Published 19 ನವೆಂಬರ್ 2024, 22:36 IST
Last Updated 19 ನವೆಂಬರ್ 2024, 22:36 IST
ದೋಷಪೂರಿತ ಸೈಲೆನ್ಸರ್‌ಗಳು (ಸಂಗ್ರಹ ಚಿತ್ರ) 
ದೋಷಪೂರಿತ ಸೈಲೆನ್ಸರ್‌ಗಳು (ಸಂಗ್ರಹ ಚಿತ್ರ)    

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ವಾಹನಗಳ ಸೈಲೆನ್ಸರ್‌ ಮಾರ್ಪಾಡು ಮಾಡಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಯುವಕರ ಸೈಲೆನ್ಸರ್ ಮಾರ್ಪಾಡಿಸುವ ‘ಕ್ರೇಜ್‌’ ಇತರರಿಗೆ ಸಮಸ್ಯೆ ತಂದೊಡ್ಡುತ್ತಿದೆ. ಹಲವು ಬಡಾವಣೆಗಳಲ್ಲಿ ದೋಷಪೂರಿತ ಸೈಲೆನ್ಸರ್‌ ಹಾವಳಿ ಮಿತಿ ಮೀರಿದೆ.

ಬೆಂಗಳೂರಿನಲ್ಲಿ ಪ್ರತಿನಿತ್ಯ ಹೊಸ ಹೊಸ ವಾಹನಗಳು ಸಾವಿರಾರು ಸಂಖ್ಯೆಯಲ್ಲಿ ರಸ್ತೆಗೆ ಇಳಿಯುತ್ತಿದ್ದು, ಶಬ್ದ ಮಾಲಿನ್ಯವೂ ದುಪ್ಪಟ್ಟಾಗಿದೆ. ಅದರ ಜತೆಗೆ ಕೆಲವು ಬೈಕ್‌ ಸವಾರರ ಸೈಲೆನ್ಸರ್ ಬದಲಾವಣೆಯ ಹುಚ್ಚಾಟವು ವೃದ್ಧರು, ವಿದ್ಯಾರ್ಥಿಗಳು, ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳು, ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಆಪತ್ತು ತರುತ್ತಿದೆ.

ADVERTISEMENT

ಕಂಪನಿಗಳಿಂದ ಖರೀದಿಸಿದ ಹೊಸ ಬೈಕ್‌ ಅಥವಾ ತಮ್ಮ ಬಳಿಯಿದ್ದ ಹಳೇ ಬೈಕ್‌ಗಳ ಸೈಲೆನ್ಸರ್‌ ತೆಗೆಸಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಅನ್ನು ಪುಂಡರು ಅಳವಡಿಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಬೈಕ್‌ಗಳು ರಸ್ತೆಯಲ್ಲಿ ಸಂಚರಿಸುವಾಗ ಜೋರು ಶಬ್ದ ಮಾಡುತ್ತವೆ. ಇದರಿಂದ ಕಿರಿಕಿರಿಯಾಗುತ್ತದೆ ಎಂದು ವೃದ್ದರು ಅಳಲು ತೋಡಿಕೊಂಡಿದ್ದಾರೆ.

ಆಕರ್ಷಿಸಲು ಪುಂಡರ ತಂತ್ರ: ‌ಬೇರೆಯವರನ್ನು ಆಕರ್ಷಿಸಲು ಬೈಕ್‌ಗೆ ಕಂಪನಿಯವರು ನೀಡಿದ ಸೈಲೆನ್ಸರ್‌ ಬದಲಿಸಿ ನಿಯಮಗಳಿಗೆ ವಿರುದ್ಧವಾಗಿ ಹೆಚ್ಚು ಶಬ್ದ ಉಂಟು ಮಾಡುವ ಸೈಲೆನ್ಸರ್ ಅನ್ನು ಪುಂಡರು ಅಳವಡಿಸಿಕೊಂಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡಲು ತೊಂದರೆ ಆಗುತ್ತದೆ. ಆ ಶಬ್ದಕ್ಕೆ ಹೆದರಿ ಪುಟ್ಟ ಮಕ್ಕಳೂ ತರಗತಿಗಳಲ್ಲಿ ಕ್ಷಣಕಾಲ ಆತಂಕದಿಂದಲೇ ಕುಳಿತುಕೊಳ್ಳುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಶಿಕ್ಷಕಿ ಮೇಘಾ ಆಗ್ರಹಿಸಿದರು.

ಆಸ್ಪತ್ರೆ ಸುತ್ತಮುತ್ತ, ತುಮಕೂರು ಹೆದ್ದಾರಿ, ದೇವನಹಳ್ಳಿ ರಸ್ತೆ, ನೈಸ್‌ ರಸ್ತೆಯಲ್ಲಿ ಪುಂಡರ ಹಾವಳಿ ಮಿತಿಮೀರಿದೆ. ಅಧಿಕ ಶಬ್ದ ಬರುವ ಸೈಲೆನ್ಸರ್‌ಗಳು ಉಂಟು ಮಾಡುವ ಶಬ್ದದಿಂದ ಹೃದಯಾಘಾತ ಆಗುವ ಸಾಧ್ಯತೆಯಿದೆ. ಪುಟ್ಟ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ವೈದ್ಯರೊಬ್ಬರು ಹೇಳಿದರು.   

ಎಲ್ಲೆಲ್ಲಿ ಹೆಚ್ಚು ಹಾವಳಿ?: ಟಿ.ದಾಸರಹಳ್ಳಿ, ವಿದ್ಯಾರಣ್ಯಪುರ, ಪೀಣ್ಯ ಕೈಗಾರಿಕಾ ಪ್ರದೇಶ, ನೈಸ್‌ ರಸ್ತೆ, ಸುಂಕದಕಟ್ಟೆ, ಇಂದಿರಾನಗರ, ಕೆಂಗೇರಿ ಉಪ ನಗರ, ಎಲೆಕ್ಟ್ರಾನಿಕ್‌ ಸಿಟಿ, ರಾಜರಾಜೇಶ್ವರಿ ನಗರ, ಮಾಗಡಿ ರಸ್ತೆ, ಕೆ.ಆರ್‌. ಮಾರುಕಟ್ಟೆ, ಚಾಮರಾಜಪೇಟೆ, ಕಲಾಸಿಪಾಳ್ಯ ಭಾಗದಲ್ಲಿ ಸೈಲೆನ್ಸರ್‌ ಬದಲಾವಣೆ ಮಾಡಿಕೊಂಡು ಓಡಾಟ ನಡೆಸುತ್ತಿರುವ ಪುಂಡರ ಸಂಖ್ಯೆ ಹೆಚ್ಚಾಗಿದೆ. ಇನ್ನೂ ಚರ್ಚ್‌ ರಸ್ತೆ, ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್‌ ರಸ್ತೆ, ಕೋರಮಂಗಲದಲ್ಲಿ ವಾರಾಂತ್ಯದಲ್ಲಿ ರಾತ್ರಿ ವೇಳೆ ಈ ರೀತಿಯ ಕಿರಿಕಿರಿ ಸಾಮಾನ್ಯವಾಗಿದೆ ಎಂದು ನಿವಾಸಿಗಳು ಹೇಳಿದ್ದಾರೆ.

ಹೆಲ್ಮೆಟ್‌ ರಹಿತ ಚಾಲನೆ, ಚಾಲನೆ ಸಮಯದಲ್ಲಿ ಮೊಬೈಲ್‌ ಬಳಕೆ, ಸಿಗ್ನಲ್‌ ದಾಟುವುದು, ಪ್ರವೇಶ ನಿರ್ಬಂಧಿತ ಮಾರ್ಗದಲ್ಲಿ ವಾಹನ ಸಂಚಾರ, ನಿಲುಗಡೆ ನಿಷೇಧಿತ ಸ್ಥಳದಲ್ಲಿ ವಾಹನ ನಿಲುಗಡೆ, ಏಕಮುಖ ಮಾರ್ಗದಲ್ಲಿ ವಾಹನ ಸಂಚಾರ ಮಾಡುತ್ತಿದ್ದವರ ವಿರುದ್ಧವೇ ನಗರ ಪೊಲೀಸರು ಹೆಚ್ಚಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೈಲೆನ್ಸರ್‌ ಮಾರ್ಪಾಡು ಮಾಡಿಕೊಂಡು ಕಿರಿಕಿರಿ ತರುತ್ತಿರುವ ಪುಂಡರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಬೇಕು ಎಂದು ದಾಸರಹಳ್ಳಿಯ ನಿವಾಸಿ ಮೋಹನ್‌ ಆಗ್ರಹಿಸಿದರು. 

ಸೈಲೆನ್ಸರ್ ಮಾರ್ಪಾಡು ಮಾಡಿಕೊಂಡು ಕಿರಿಕಿರಿ ಉಂಟು ಮಾಡುತ್ತಿದ್ದವರ ಮಾಹಿತಿ ನೀಡಿದರೆ ತಕ್ಷಣವೇ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಕ್ರಮ ತೆಗೆದುಕೊಳ್ಳಲಿದ್ದಾರೆ
ಎಂ.ಎನ್‌.ಅನುಚೇತ್‌ ಜಂಟಿ ಪೊಲೀಸ್‌ ಕಮಿಷನರ್‌ ಸಂಚಾರ ವಿಭಾಗ

ಕಾರ್ಯರೂಪಕ್ಕೆ ಬಾರದ ಆದೇಶ

ಸೈಲೆನ್ಸರ್ ಮಾರ್ಪಾಡು ಮಾಡಿಕೊಂಡು ವಾಹನಗಳ ನೋಂದಣಿ ಪ್ರಮಾಣ ಪತ್ರವನ್ನು(ಆರ್‌.ಸಿ) ಅಮಾನತು ಮಾಡಿ ದಂಡ ವಿಧಿಸಲಾಗುವುದು ಎಂದು ಸಾರಿಗೆ ಇಲಾಖೆ ಆಯುಕ್ತರು ಹಿಂದೆ ಹೇಳಿದ್ದರು. ದೋಷಪೂರಿತ ಸೈಲೆನ್ಸರ್‌ ಅಳವಡಿಕೆ ಮಾಡುತ್ತಿರುವ ಗ್ಯಾರೇಜ್‌ಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದರು. ಅವರ ಆದೇಶ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ ಎಂಬ ಆರೋಪ ಇದೆ. ಸಂಚಾರ ಪೊಲೀಸರು ಮಾತ್ರ ಆಗಾಗ್ಗೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ವಾರ ನಡೆದ ಕಾರ್ಯಾಚರಣೆಯಲ್ಲಿ 47 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.