ವಯಸ್ಸು ಕಳೆದಿದೆ ಇನ್ನೇನಿದ್ರು ದೇವರಿಚ್ಛೆ ಅಂತ ಮನೆಯಲ್ಲಿ ಕುಳಿತು ಕಾಲ ಕಳೆಯುವ ಎಷ್ಟೋ ಹಿರಿಯ ಜೀವಗಳು ಸಂತೋಷಿಸುವ ಮನಸ್ಥಿತಿಯನ್ನೇ ಮರೆತಿರುತ್ತಾರೆ. ಮಕ್ಕಳು ಕೆಲಸದ ನಿಮಿತ್ತ ದೂರದೂರಿನಲ್ಲಿ ನೆಲೆಸಿರುತ್ತಾರೆ. ಎಲ್ಲರಿಗೂ ಅವರದ್ದೇ ಆದ ಬದುಕಿದೆ. ಹೀಗಾಗಿ ಪೋಷಕರು ಒಂದು ರೀತಿಯ ಒಂಟಿತನದ ಬದುಕನ್ನು ಅನುಭವಿಸುತ್ತಿರುತ್ತಾರೆ. ಆದರೆ, ಅಂಥ ಜೀವಗಳಿಗೆ ಚೈತನ್ಯ ತುಂಬುವ ಕೆಲಸವನ್ನು ಬೆಂಗಳೂರಿನ ಸಾಗರ್ ಆಸ್ಪತ್ರೆ ಮಾಡುತ್ತಿದೆ.
50 ರಿಂದ 60 ವರ್ಷ ವಯೋಮಿತಿಯ ಹಿರಿಯ ವಯಸ್ಕರು ತಿಂಗಳಿಗೊಮ್ಮೆ ಸೇರಿ ವಿವಿಧ ಮನರಂಜನಾ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಾರೆ. ಅಲ್ಲದೆ ಆಯಾ ತಿಂಗಳಲ್ಲಿ ಜನಿಸಿದ ಎಲ್ಲಾ ವಯಸ್ಕರಿಗೆ ಒಂದೇ ವೇದಿಕೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತದೆ. ಈ ವಿನೂತನ ವೇದಿಕೆಗೆ ‘ಸಿಲ್ವರ್ ಕ್ಲಬ್’ ಎಂದು ಹೆಸರಿಸಲಾಗಿದೆ.
ಪ್ರತಿ ತಿಂಗಳು ಹಿರಿಯ ನಾಗರಿಕರು ಸಾಗರ್ ಆಸ್ಪತ್ರೆಯಲ್ಲಿ ಸಭೆ ಸೇರುತ್ತಾರೆ . ಈ ವೇಳೆ ಪರಸ್ಪರ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಹಾಡು, ಹರಟೆ, ನೃತ್ಯ ಹೀಗೆ ನಾನಾ ರೀತಿಯ ಚಟುವಟಿಕೆಗಳನ್ನು ಪ್ರದರ್ಶಿಸುತ್ತಾರೆ. ಈ ಮೂಲಕ ಮಾನಸಿಕ ಹಾಗೂ ದೈಹಿಕ ಆರೋಗ್ಯ ಚೈತನ್ಯಕ್ಕೆ ಮತ್ತಷ್ಟು ಬಲ ತುಂಬುವ ಕೆಲಸವಾಗುತ್ತಿದೆ. ಇದೇ ವೇಳೆ ಆಸ್ಪತ್ರೆಯಿಂದ ಹಿರಿಯ ಜೀವಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತದೆ. ಅಲ್ಲದೇ ವೈದ್ಯರಿಂದ ಮೌಲ್ಯಯುತ ಮಾಹಿತಿಯನ್ನು ನೀಡಲಾಗುತ್ತದೆ.
ಹಿರಿಯ ನಾಗರಿಕರಾದ ನಿವೃತ್ತ ಸಹಾಯಕ ನಿರ್ದೇಶಕಿ ಸುಚೇತಾ ವಿ ಹೆಗಡೆ ಹೇಳುವುದಿಷ್ಟು; ಈ ವಯಸ್ಸಿನಲ್ಲಿ ಒಂಟಿತನದ ಸಮಸ್ಯೆ ಅನೇಕರಿಗೆ ಕಾಡುತ್ತದೆ. ಅಂಥ ಸಮಸ್ಯೆಯನ್ನು ನೀಗಿಸುವ ಪ್ರಯತ್ನದಲ್ಲಿ ಸಾಗರ್ ಆಸ್ಪತ್ರೆಯು ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ನಿವೃತ್ತರಾದ ದೇವಣ್ಣ ಬಿ.ಎಚ್ ಮಾತನಾಡಿ, ಹಿರಿಯ ಜೀವಗಳಿಗೆ ಚೈತನ್ಯ ತುಂಬುವ ಕೆಲಸ ಶ್ಲಾಘನೀಯ. ನಾನು ಈ ವೇದಿಕೆಯ ಭಾಗವಾಗಿರುವುದಕ್ಕೆ ಸಂತೋಷವಿದೆ ಎಂದರು.
ಡಯಾಲಿಸಿಸ್ ರೋಗಿಯಾದ ಶ್ಯಾಮ್ ಸುಂದರ್, ನನಗೆ ಕರೋಕೆ ಅಂದ್ರೆ ತುಂಬಾ ಇಷ್ಟ. ಅದನ್ನು ಈ ವೇದಿಕೆಯಲ್ಲಿ ಪ್ರದರ್ಶಿಸಿದ್ದೇನೆ. ಹಾಗಾಗಿ ಈ ವೇದಿಕೆ ನಿಜಕ್ಕೂ ಸ್ಫೂರ್ತಿದಾಯಕ ಎನ್ನುತ್ತಾರೆ. ಸಾಗರ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಅಧ್ಯಕ್ಷರಾದ ಇಶಿಕಾ ಮುಲ್ತಾನಿ ಈ ಪ್ರಯತ್ನಕ್ಕೆ ಹರ್ಷ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.